ADVERTISEMENT

ಮೀನುಗಾರರ ನೆರವಿಗೆ ಮತ್ಸ್ಯ ಸಂಪದ ಯೋಜನೆ: ಸಚಿವ ಎಸ್. ಅಂಗಾರ

ಸ್ವಉದ್ಯೋಗದಿಂದ ನಿರುದ್ಯೋಗ ನಿವಾರಣೆ: ಜಿಲ್ಲಾ ಉಸ್ತುವಾರಿ

​ಪ್ರಜಾವಾಣಿ ವಾರ್ತೆ
Published 23 ಮೇ 2022, 13:20 IST
Last Updated 23 ಮೇ 2022, 13:20 IST
ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಸೋಮವಾರ ಅಮೃತ ಸ್ವಸಹಾಯ ಕಿರು ಉದ್ದಿಮೆ ಯೋಜನೆಯಡಿ ಸ್ತ್ರೀಶಕ್ತಿ ಗುಂಪುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಬೀಜ ಧನದ ಚೆಕ್ ವಿತರಿಸಿದರು.
ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಸೋಮವಾರ ಅಮೃತ ಸ್ವಸಹಾಯ ಕಿರು ಉದ್ದಿಮೆ ಯೋಜನೆಯಡಿ ಸ್ತ್ರೀಶಕ್ತಿ ಗುಂಪುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಬೀಜ ಧನದ ಚೆಕ್ ವಿತರಿಸಿದರು.   

ಉಡುಪಿ: ನಿರುದ್ಯೋಗ ಸಮಸ್ಯೆ ಬಗೆಹರಿಸಲು ಸ್ವಉದ್ಯೋಗದ ಅವಶ್ಯಕತೆ ಹೆಚ್ಚಿದೆ. ಯುವಜನತೆ ಸ್ವಾವಲಂಬಿಗಳಾಗುವ ಮೂಲಕ ಆರ್ಥಿಕವಾಗಿ ಸಬಲರಾದರೆ ದೇಶದ ಆರ್ಥಿಕತೆ ಅಭಿವೃದ್ಧಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು.

ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಮೃತ ಸ್ವಸಹಾಯ ಕಿರು ಉದ್ದಿಮೆ ಯೋಜನೆಯಡಿ ಸ್ತ್ರೀಶಕ್ತಿ ಗುಂಪುಗಳಿಗೆ ಬೀಜ ಧನ ಚೆಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ, ಆರೋಗ್ಯ ಕ್ಷೇತ್ರ, ಸ್ತ್ರೀಶಕ್ತಿ ಗುಂಪುಗಳ ಮೂಲಕ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಸಣ್ಣ ಉದ್ದಿಮೆಗಳನ್ನು ಆರಂಭಿಸಲು ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದ್ದು ಫಲಾನುಭವಿಗಳು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ADVERTISEMENT

ಕರಾವಳಿಯಲ್ಲಿ ಒಳನಾಡು ಮೀನುಗಾರಿಕೆ ಹೆಚ್ಚು ಆದಾಯವನ್ನು ತಂದುಕೊಡುವ ಕ್ಷೇತ್ರವಾಗಿದ್ದು, ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಮೀನಿನ ಗುಣಮಟ್ಟ ಕಾಪಾಡಿಕೊಳ್ಳಲು ಶೀಥಲೀಕರಣ ಘಟಕಗಳ ನಿರ್ಮಾಣಕ್ಕೆ, ಮೀನು ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆ ಹಾಗೂ ಶಿಥಲೀಕರಣ ವಾಹನಗಳ ಖರೀದಿಗೆ ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆ ಮೂಲಕ ಆರ್ಥಿಕ ನೆರವು ನೀಡಲಾಗುತ್ತಿದೆ. ಅಗತ್ಯವಿದ್ದವರು ಸರ್ಕಾರದ ನೆರವು ಪಡೆದು ಸ್ವಉದ್ಯೋಗದ ಮೂಲಕ ಆರ್ಥಿಕ ಪ್ರಗತಿ ಸಾಧಿಸಬೇಕು ಎಂದರು.

ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ, ಸರ್ಕಾರದಿಂದ ಮಂಜೂರಾಗುವ ಆರ್ಥಿಕ ನೆರವಿನ ಯೋಜನೆಗಳಲ್ಲಿ ಜಿಲ್ಲೆಗೆ ನಿಗದಿಪಡಿಸಿರುವ ಗುರಿ ಅತ್ಯಂತ ಕಡಿಮೆ ಇದ್ದು ಹೆಚ್ಚಳವಾಗಬೇಕು ಎಂದು ಸಚಿವರ ಗಮನಕ್ಕೆ ತಂದರು.

ಕಾರ್ಯಕ್ರಮದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಅಂಗನವಾಡಿ ಮಕ್ಕಳಿಗೆ ಸೃಷ್ಟಿ ಹಾಗೂ ಕ್ಷೀರ ಭಾಗ್ಯ ಯೋಜನೆಯಡಿಯಲ್ಲಿ ಹಾಲು ಮತ್ತು ಮೊಟ್ಟೆ ವಿತರಿಸಲಾಯಿತು. ಬೈಂದೂರು ತಾಲ್ಲೂಕಿನ 21, ಕುಂದಾಪುರದ 6, ಉಡುಪಿಯ 1 ಮತ್ತು ಕಾಪುವಿನ 24 ಸ್ತ್ರೀಶಕ್ತಿ ಸಂಘಗಳಿಗೆ ತಲಾ ₹ 1 ಲಕ್ಷ ಮೊತ್ತದ ಬೀಜ ಧನದ ಚೆಕ್ ವಿತರಿಸಲಾಯಿತು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಪ್ರಸನ್ನ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಾಬು ಇದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವೀಣಾ ವಿವೇಕಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.