ADVERTISEMENT

ಕಾರ್ಕಳ | ಅಭಿವೃದ್ಧಿ ತತ್ವಕ್ಕೆ ಬದ್ಧರಾಗಿದ್ದ ವಾಜಪೇಯಿ: ಬಿ.ಎಲ್.ಸಂತೋಷ್

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 7:59 IST
Last Updated 27 ಡಿಸೆಂಬರ್ 2025, 7:59 IST
ಅಟಲ್ ಜನ್ಮ ಶತಾಬ್ದಿ ‌ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿ.ಎಲ್. ಸಂತೋಷ್ ಅವರನ್ನು ಸನ್ಮಾನಿಸಲಾಯಿತು
ಅಟಲ್ ಜನ್ಮ ಶತಾಬ್ದಿ ‌ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿ.ಎಲ್. ಸಂತೋಷ್ ಅವರನ್ನು ಸನ್ಮಾನಿಸಲಾಯಿತು   

ಕಾರ್ಕಳ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಾಬ್ದಿ ಪ್ರಯುಕ್ತ ಕಾರ್ಕಳ ಬಿಜೆಪಿ ವತಿಯಿಂದ ತಾಲ್ಲೂಕಿನ ಕುಕ್ಕುಂದೂರು ಮೈದಾನದಲ್ಲಿ ಅಟಲ್ ಸ್ಮರಣೆ ಆಯೋಜಿಸಲಾಗಿತ್ತು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತನಾಡಿ‌, ಅಟಲ್ ಬಿಹಾರಿ ವಾಜಪೇಯಿ ಪ್ರತಿಭೆಯ‌ ಸಂಗಮ. ವಾಜಪೇಯಿ ಕೇವಲ ರಾಜಕಾರಣಿಯಾಗಿರಲಿಲ್ಲ, ಪತ್ರಕರ್ತ, ಶ್ರೇಷ್ಠ ಸಂಸದೀಯ ಪಟು, ಅದ್ಭುತ ಕವಿಯಾಗಿದ್ದರು. ಅವರು ಮೌಲ್ಯಾಧಾರಿತ ರಾಜಕಾರಣದ ಪ್ರತೀಕವಾಗಿದ್ದರು. 1951ರಲ್ಲಿ ಜನಸಂಘ ಸ್ಥಾಪನೆಯಾದ ದಿನದಿಂದಲೂ ರಾಷ್ಟ್ರದ ಸಮಗ್ರ ಅಭಿವೃದ್ಧಿಯ ತತ್ವಕ್ಕೆ ಬದ್ಧರಾಗಿದ್ದರು. ಅಧಿಕಾರದ ಹಪಹಪಿ ಇರಲಿಲ್ಲ ಎಂದರು.

51 ವರ್ಷಗಳ ಕಾಲ ಸಕ್ರಿಯ ರಾಜನೀತಿಯಲ್ಲಿದ್ದರೂ, ಅವರು ಎಂದಿಗೂ ವೈಯಕ್ತಿಕ ಲಾಭಕ್ಕಾಗಿ ಅಥವಾ ಕುರ್ಚಿಗಾಗಿ ಹಾತೊರೆದವರಲ್ಲ. 13 ದಿನಗಳ ಸರ್ಕಾರ ಬಿದ್ದಾಗಲೂ ಅವರು ಎದೆಗುಂದದೆ ದೇಶ ಸೇವೆ, ಸಂಘಟನಾ ಚಟುವಟಿಕೆ ಮುಂದುವರಿಸಿದ್ದರು. ಈಗ ಗ್ರಾಮ ಗ್ರಾಮದಲ್ಲಿ ಕಮಲ ಅರಳುತ್ತಿದೆ. ಕೆಲವೆಡೆ ನಾವು ಸೋತಿರಬಹುದು, ಮತೊಮ್ಮೆ ಕಮಲ ಅರಳಿಸುತ್ತೇವೆ. ಇಡೀ ದೇಶದಲ್ಲಿ ಕಮಲ ಅರಳಿಸುತ್ತೇವೆ. ವಾಜಪೇಯಿ ಅವರಿಗೆ ಶ್ರದ್ದಾಂಜಲಿ, ಪುಷ್ಪಾoಜಲಿ, ಮಾತ್ರವಲ್ಲ, ಕಾರ್ಯಾಂಜಲಿ ಅರ್ಪಿಸಬೇಕಾಗಿದೆ ಎಂದರು.

ADVERTISEMENT

ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ವಿ. ಸುನಿಲ್ ಕುಮಾರ್, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ,, ಬಿಜೆಪಿ ಮುಖಂಡ ಬೋಳ ಪ್ರಭಾಕರ್ ಕಾಮತ್, ಮಣಿರಾಜ್ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಉಪಸ್ಥಿತರಿದ್ದರು.

ತಾಲ್ಲೂಕು ಕಚೇರಿ ಆವರಣದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು.

ಕಾರ್ಕಳದ ಅಟಲ್ ಬಿಹಾರಿ ವಾಜಪೇಯಿ ಪಾರ್ಕ್‌ನಲ್ಲಿ ಗಿಡ ನೆಡುವ ಮೂಲಕ ವರ್ಷಪೂರ್ತಿ ಮುಂದುವರಿಯುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅಟಲ್ ಜೀವನ ಚರಿತ್ರೆಯ ಕುರಿತ 15 ನಿಮಿಷಗಳ ವಿಡಿಯೊ ಪ್ರದರ್ಶನಗೊಂಡಿತು. 6 ಶಕ್ತಿ ಕೇಂದ್ರಗಳ ಮಹಿಳಾ ಮೋರ್ಚಾ ತಂಡದವರು ಸಮೂಹ ಗೀತೆ ಹಾಡಿದರು.

ನವಿನ್ ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ಕುಕ್ಕುಂದೂರು, ಸತ್ಯಶಂಕರ ಶೆಟ್ಟಿ ಮುಂಡ್ಕೂರು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.