ADVERTISEMENT

ಕಾಪು: ‘ಅಟಲ್‌ ಜನ್ಮಶತಾಬ್ದಿ ಅರ್ಥಪೂರ್ಣ’

ಕಾಪು ಕಡಲ ಪರ್ಬ ಸಂಪನ್ನ: ಮೋಡಿ ಮಾಡಿದ ಕುನಾಲ್ ಗಾಂಜಾವಾಲಾ, ರಘು ದೀಕ್ಷಿತ್ ಗಾಯನ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 7:42 IST
Last Updated 30 ಡಿಸೆಂಬರ್ 2025, 7:42 IST
ಕಾಪು ಕಡಲ ಪರ್ಬದ ಸಮಾರೋಪ ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್ ಅವರನ್ನು ಸನ್ಮಾನಿಸಲಾಯಿತು
ಕಾಪು ಕಡಲ ಪರ್ಬದ ಸಮಾರೋಪ ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್ ಅವರನ್ನು ಸನ್ಮಾನಿಸಲಾಯಿತು   

ಕಾಪು: ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿ ಪ್ರಯುಕ್ತ ಮಂಡಲ ಬಿಜೆಪಿ ವತಿಯಿಂದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಇಲ್ಲಿನ ಕಾಪು ಪಡು ಕಡಲ ಕಿನಾರೆಯಲ್ಲಿ 3 ದಿನ ನಡೆದ ‘ಕಾಪು ಕಡಲ ಪರ್ಬ’ ಭಾನುವಾರ ಸಮಾರೋಪಗೊಂಡಿತು.

ಬೀಚ್ ಉತ್ಸವದಲ್ಲಿ ಆಹಾರ ಮೇಳ, ಕ್ರೀಡೋತ್ಸವ, ಸಾಂಸ್ಕೃತಿಕ ಉತ್ಸವ ಮೇಳೈಸಿತು. ಶನಿವಾರ ರಘು ದೀಕ್ಷಿತ್, ಭಾನುವಾರ ಕುನಾಲ್ ಗಾಂಜಾವಾಲಾ ಅವರ ಸಂಗೀತ ರಸಮಂಜರಿ ನಡೆಯಿತು. ಅವರ ಹಾಡುಗಳು ಯುವಕ, ಯುವತಿಯರಿಗೆ ಮೋಡಿ ಮಾಡಿತು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಕುನಾಲ್ ಗಾಂಜಾವಾಲಾ ಹಾಡಿಗೆ ವೇದಿಕೆಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು.

‘ನಾ ಕಂಡಂತೆ ಅಟಲ್’ ವಿಷಯದಲ್ಲಿ ಪ್ರಬಂಧ ಸ್ಪರ್ಧೆ, ಆತ್ಮನಿರ್ಭರ ಭಾರತ ವಿಷಯದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ, ಉಚಿತ ನೇತ್ರ ತಪಾಸಣೆ, ಕನ್ನಡಕ ವಿತರಣೆ, ದಂತ ಚಿಕಿತ್ಸಾ ಶಿಬಿರ, ಪುರುಷರು, ಮಹಿಳೆಯರಿಗೆ ಬೀಚ್ ಹಗ್ಗಜಗ್ಗಾಟ, ಮರಳು ಶಿಲ್ಪ ರಚನೆ ಸ್ಪರ್ಧೆ, ಆರೋಗ್ಯ ಶಿಬಿರ, ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್ ಟೂರ್ನಿ ನಡೆಯಿತು. ಮೂರು ದಿನ ಜನಸ್ತೋಮ ಹರಿದುಬಂತು.

ADVERTISEMENT

ಸಾಧಕರಿಗೆ ಪುರಸ್ಕಾರ: ಮುಖಂಡ ಲಾಲಾಜಿ ಆರ್. ಮೆಂಡನ್, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, ಡಾ.ವಿದ್ಯಾಧರ್, ಡಾ.ದೇವದಾಸ್ ಕಾಮತ್ ಹಿರಿಯಡ್ಕ ಸಹಿತ ಐವರು ಸಾಧಕರಿಗೆ ಅಟಲ್ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಶ್ವ ದಾಖಲೆ ಮಾಡಿದ ತನುಶ್ರೀ ಪಿತ್ರೋಡಿ, ವಿದುಷಿ ದೀಕ್ಷಾ ವಿ. ಅವರನ್ನು ಸನ್ಮಾನಿಸಲಾಯಿತು.

‘ಅಟಲ್‌ಜೀ ವ್ಯಕ್ತಿತ್ವ ಅಮರ’

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಎಲ್ಲರನ್ನೂ ಪ್ರೀತಿಯಿಂದ ಕಂಡ ಹಮ್ಮು– ಬಿಮ್ಮು ಇಲ್ಲದ ಸರಳ ವ್ಯಕ್ತಿತ್ವದ ನಾಯಕ ಅಟಲ್ ಬಿಹಾರಿ ವಾಜಪೇಯಿ. ಅವರು ಇಂದು ನಮ್ಮ ನಡುವೆ ಇಲ್ಲವಾದರೂ ಅವರ ಆದರ್ಶ ವ್ಯಕ್ತಿತ್ವದ ಮೂಲಕ ಅಮರರಾಗಿದ್ದಾರೆ. ಅಟಲ್‌ಜೀ ಅವರ ಜನ್ಮಶತಾಬ್ದಿಯನ್ನು ಕಾಪು ಕಡಲ ಪರ್ಬವು ಅರ್ಥಪೂರ್ಣವಾಗಿಸಿದೆ ಎಂದರು. ಅದ್ಯಕ್ಷತೆ ವಹಿಸಿದ್ದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಧೀಮಂತ ರಾಜಕಾರಣಿ ವಾಜಪೇಯಿ ಅಜಾತ ಶತ್ರುವಾಗಿದ್ದರು ಎಂದರು. ಶಾಸಕರಾದ ಯಶ್‌ಪಾಲ್ ಎ. ಸುವರ್ಣ ವಿ. ಸುನಿಲ್ ಕುಮಾರ್ ಕಿರಣ್ ಕೊಡ್ಗಿ ಧೀರಜ್ ಮುನಿರಾಜು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಪ್ರಮುಖರಾದ ಸಂದೀಪ್ ರವಿ ದಿನಕರ ಬಾಬು ನಿತಿನ್ ರೇಶ್ಮಾ ಶೆಟ್ಟಿ ಶ್ರೀಕಾಂತ್ ನಾಯಕ್ ಸಂಧ್ಯಾ ರಮೇಶ್ ಶ್ಯಾಮಲಾ ಕುಂದರ್ ಕುತ್ಯಾರು ನವೀನ್ ಶೆಟ್ಟಿ ಗೋಪಾಲಕೃಷ್ಣ್ಣ ರಾವ್ ಶರಣ್ ಕುಮಾರ್ ಮಟ್ಟು ಸಂತೋಷ್ ಮೂಡುಬೆಳ್ಳೆ ಸೋನು ಪಾಂಗಾಳ ನೀತಾ ಗುರುರಾಜ್ ಪಾರ್ಥಸಾರಥಿ ಕೃಷ್ಣ ರಾವ್ ಗಾಯತ್ರಿ ಪ್ರಭು ಭಾಗವಹಿಸಿದ್ದರು. ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ವಂದಿಸಿದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ ಸಂತೋಷ್ ನಂಬಿಯಾರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.