ADVERTISEMENT

ತುಳು ಸಂಸ್ಕೃತಿ ವಿಶಿಷ್ಟತೆಯಿಂದ ಕೂಡಿದೆ

ಮಹಿಳೆಯರ ಕೂಟದಲ್ಲಿ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 20:18 IST
Last Updated 22 ಜುಲೈ 2019, 20:18 IST
ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಸೋಮವಾರ ಆಯೋಜಿಸಲಾದ ಆಷಾಡದಲ್ಲೊಂದು ದಿನ -ಮಹಿಳೆಯರ ಕೂಟವನ್ನು ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಉದ್ಘಾಟಿಸಿದರು.
ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಸೋಮವಾರ ಆಯೋಜಿಸಲಾದ ಆಷಾಡದಲ್ಲೊಂದು ದಿನ -ಮಹಿಳೆಯರ ಕೂಟವನ್ನು ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಉದ್ಘಾಟಿಸಿದರು.   

ಉಡುಪಿ: ಉತ್ತಮ ಜೀವನ ಕ್ರಮವನ್ನು ಅಳವಡಿಸಿಕೊಂಡು ಬಂದಿರುವ ತುಳು ಸಂಸ್ಕೃತಿ ನೈಸಗಿಕ ಹಾಗೂ ಸಾಂಸ್ಕೃತಿಕವಾಗಿ ಸಾಕಷ್ಟು ವಿಶಿಷ್ಟತೆಯನ್ನು ಹೊಂದಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಹೇಳಿದರು.

ಉಡುಪಿ ತಾಲ್ಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಂಟರ ಯಾನೆ ನಾಡವರ ಮಾತೃ ಸಂಘ ತಾಲ್ಲೂಕು ಸಮಿತಿ, ಬಂಟರ ಸಂಘ ಉಡುಪಿ ಹಾಗೂ ತುಳುಕೂಟ ಉಡುಪಿ ಇವುಗಳ ಸಹಯೋಗದೊಂದಿಗೆ ಸೋಮವಾರ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಆಯೋಜಿಸಲಾದ ಆಷಾಡದಲ್ಲೊಂದು ದಿನ -ಮಹಿಳೆಯರ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ತುಳು ಸಂಸ್ಕೃತಿಯಲ್ಲಿರುವ ಉತ್ತಮ ಮೌಲ್ಯಗಳನ್ನು ಗ್ರಹಿಸಿ ಹಾಗೂ ಒಳ್ಳೆಯ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವುದರಿಂದ ಆದರ್ಶ ಬದುಕು ನಡೆಸಲು ಸಾಧ್ಯ ಎಂದರು.

ADVERTISEMENT

ಕೃಷಿಯಲ್ಲಿ ತೊಡಗಿಸಿಕೊಳ್ಳುವ ತುಳುನಾಡಿನ ಮಹಿಳೆಯರು ಮಳೆಗಾಲದಲ್ಲಿ ತಮ್ಮ ತುಳು ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಈ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಮುಂದುವರೆಸುವ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದು ಹೇಳಿದರು.

ಉಡುಪಿ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿಂಧು ರೂಪೇಶ್‌ ಮಾತನಾಡಿ, ತುಳು ಸಂಸ್ಕೃತಿಯ ಭಾಗವಾಗಿರುವ ಆಟಿ ತಿಂಗಳ ಆಚರಣೆ ನಮಗೆ ಹೊಸ ಅನುಭವ. ತುಳುನಾಡಿನ ಖಾದ್ಯ ಇಡೀ ಜಗತ್ತಿನಲ್ಲೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಅತ್ಯಂತ ವಿಶಿಷ್ಟವಾದ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಎಲ್ಲರೂ ಮಾಡಬೇಕು ಎಂದು ಹೇಳಿದರು.

ಉಡುಪಿ ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಸರಳಾ ಕಾಂಚನ್‌ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಬಂಟರ ಸಂಘದ ಸಹ ಸಂಚಾಲಕ ಅಂಡಾರು ದೇವಿಪ್ರಸಾದ್‌ ಶೆಟ್ಟಿ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಮಾತೃ ಸಂಘದ ಕಾರ್ಯದರ್ಶಿ ಮೋಹನ್‌ ಶೆಟ್ಟಿ ನಿಡಂಬೂರು, ಕೋಶಾಧಿಕಾರಿ ತೋನ್ಸೆ ಮನೋಹರ ಶೆಟ್ಟಿ, ಕುಂದಾಪುರ ತಾಲ್ಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ರಾಧಾದಾಸ್‌ ಉಪಸ್ಥಿತರಿದ್ದರು.

ವಿವಿಧ ಆಟೋಟ ಸ್ಪರ್ಧೆಯ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ನಳಪಾಕ ಮಾಡಿ ತಂಡ ಮಹಿಳೆಯರನ್ನು ಗೌರವಿಸಲಾಯಿತು. ತಾಲ್ಲೂಕು ಒಕ್ಕೂಟದ ಅಧ್ಯಕ್ಷೆ ಶೀಲಾ ಕೆ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಯಶೋಧಾ ಜೆ. ಶೆಟ್ಟಿ ಸ್ವಾಗತಿಸಿದರು. ಪ್ರಸನ್ನ ಪ್ರಸಾದ್‌ ರಾವ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.