ADVERTISEMENT

‘ಟ್ರಾಫಿಕ್‌ ಕಿರಿಕಿರಿ ತಪ್ಪಿಸಿ: ಮಟ್ಕಾ ನಿಲ್ಲಿಸಿ’

ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರುಗಳನ್ನು ಆಲಿಸಿದ ಎಸ್‌ಪಿ ಲಕ್ಷ್ಮಣ ನಿಂಬರಗಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 13:37 IST
Last Updated 26 ಅಕ್ಟೋಬರ್ 2018, 13:37 IST
ಎಸ್‌ಪಿ ಕಚೇರಿಯಲ್ಲಿ ಫೋನ್‌ ಇನ್‌ ಕಾರ್ಯಕ್ರಮ ನಡೆಯಿತು.
ಎಸ್‌ಪಿ ಕಚೇರಿಯಲ್ಲಿ ಫೋನ್‌ ಇನ್‌ ಕಾರ್ಯಕ್ರಮ ನಡೆಯಿತು.   

ಉಡುಪಿ: ‘ಸರ್ ನಾನು ಐದಾರು ವರ್ಷಗಳಿಂದ ಆಟೋ ಓಡಿಸುತ್ತಿದ್ದೇನೆ. ವ್ಯಕ್ತಿಯೊಬ್ಬ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಏನು ಮಾಡುವುದು ತೋಚುತ್ತಿಲ್ಲ. ದಯವಿಟ್ಟು ರಕ್ಷಣೆ ಕೊಡಿ’ ಎಂದು ಆಟೊ ಚಾಲಕನೊಬ್ಬ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಳಿ ಅಂಗಲಾಚಿದ ಪ್ರಸಂಗ ನಡೆಯಿತು.

ದೂರನ್ನು ಆಲಿಸಿದ ಎಸ್‌ಪಿ ಲಕ್ಷ್ಮಣ ನಿಂಬರಗಿ, ‘ಭಯಪಡಬೇಡಿ. ನಗರ ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ಕೊಡಿ. ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಎಸ್‌ಪಿ, ದೂರುದಾರ ಸರ್ವೀಸ್‌ ಬಸ್‌ ಸ್ಟಾಂಡ್‌ ಬಳಿಯ ಆಟೋ ಸ್ಟಾಂಡ್‌ನಲ್ಲಿ ಆಟೊ ಓಡಿಸುತ್ತಾರೆ. ಸಹೋದ್ಯೋಗಿ ಜತೆ ಜಗಳವಾಡಿಕೊಂಡಿಕೊಂಡಿದ್ದು, ಕೊಲೆ ಮಾಡುವುದಾಗಿ ಆತ ಬೆದರಿಕೆ ಹಾಕಿದ್ದರಿಂದ ಭಯಗೊಂಡು ರಕ್ಷಣೆ ಕೋರಿದ್ದಾರೆ ಎಂದರು.

ADVERTISEMENT

ಮತ್ತೊಬ್ಬರು ಕರೆಮಾಡಿ ಮಣಿಪಾಲ–ಪರ್ಕಳ–ಅಂಬಾಗಿಲು ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ತುಂಬಾ ಸಮಸ್ಯೆಯಾಗಿದೆ. ಟ್ರಾಫಿಕ್‌ ಪೊಲೀಸರನ್ನು ನಿಯೋಜಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ರಸ್ತೆ ವಿಸ್ತರಣೆ ಕಾರ್ಯ ನಡೆಯುತ್ತಿರುವುದರಿಂದ ಹಾಗೂ ಕಿರಿದಾದ ರಸ್ತೆಯಾಗಿರುವ ಕಾರಣ ಟ್ರಾಫಿಕ್‌ ಸಮಸ್ಯೆಯಾಗಿದೆ. ಈ ಬಗ್ಗೆ ಪರಿಶೀಲಿಸಿ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡುವುದಾಗಿ ಎಸ್‌ಪಿ ಭರವಸೆ ನೀಡಿದರು.

ಬ್ರಹ್ಮಗಿರಿ ಸರ್ಕಲ್‌ನಿಂದ ಎಸ್‌ಪಿ ಕಚೇರಿವರೆಗಿನ ರಸ್ತೆ ತುಂಬಾ ಹಾಳಾಗಿದೆ. ವಾಹನ ಸಂಚಾರ ದುಸ್ತರವಾಗಿದೆ ಎಂಬ ದೂರಿಗೆ ಸ್ಪಂದಿಸಿದ ಎಸ್‌ಪಿ, ನಗರಸಭೆ ಅಧಿಕಾರಿಗಳ ಜತೆ ಚರ್ಚಿಸಿ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ನಗರದ ಮೀನುಮಾರುಕಟ್ಟೆ ಬಳಿ ಪಾರ್ಕಿಂಗ್ ಸಮಸ್ಯೆ ಇದೆ. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಸಮಸ್ಯೆಯಾಗಿದೆ ಎಂದು ವ್ಯಕ್ತಿಯೊಬ್ಬರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಸಂಚಾರ ಪೊಲೀಸರು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದರು.

ಬೈಂದೂರಿನ ಉಪ್ಪುಂದದಿಂದ ಮದ್ಯವನ್ನು ತಂದು ಕಂಬದಕೋಣೆ ಗ್ರಾಮದ ಅಂಗಡಿಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ.ಕಾರ್ಕಳ ಗ್ರಾಮಾಂತರ ಭಾಗದಲ್ಲೂ ನಿಯಮಮೀರಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿಗೆ ಸ್ಪಂದಿಸಿ, ಎರಡೂ ವಿಭಾಗಗಳ ಠಾಣಾಧಿಕಾರಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಯಿತು.

ಬ್ರಹ್ಮಾವರದ ಯಡ್ರಾಡಿ ಬಳಿ ರಸ್ತೆ ಬದಿಯಲ್ಲಿ ಒಣಗಿದ ಮರವೊಂದು ರಸ್ತೆಗೆ ಬೀಳುವ ಹಂತದಲ್ಲಿದೆ. ಅದನ್ನು ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಶೀಘ್ರ ತೆರವಿಗೆ ಕ್ರಮತೆಗೆದುಕೊಳ್ಳಬೇಕು ಎಂದು ನಾಗರಿಕರೊಬ್ಬರು ಒತ್ತಾಯಿಸಿದರು.

ಹಾಗೆಯೇ ಕಾರ್ಕಳದ ಕುಕಂದೂರು ಪರಿಸರದಲ್ಲಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು. ಹಾಲಾಡಿ ಬಸ್‌ ನಿಲ್ದಾಣದಲ್ಲಿ ಮಟ್ಕಾ ನಡೆಯುತ್ತಿದ್ದು, ಕ್ರಮ ಜರುಗಿಸಬೇಕು, ಕಾಪು ಜನಾರ್ದನ ದೇವಸ್ಥಾನದ ಬಳಿಕ ವಾಹನಗಳ ಪಾರ್ಕಿಂಗ್ ಸಮಸ್ಯೆ ಬಗೆಹರಿಸಬೇಕು. ಕಾರ್ಕಳದ ವೆಂಕಟರಮಣಸ್ವಾಮಿ ದೇವಸ್ಥಾನದ ಬಳಿ ಹಂಪ್‌ ತೆರವುಗೊಳಿಸಬೇಕು, ಮಂದಾರ್ತಿ ಸಮೀಪದ ಅಶ್ವತ್‌ ಕಟ್ಟೆಬಳಿ ಜೂಜಾಟ ನಡೆಯುತ್ತಿದ್ದು, ಕಡಿವಾಣ ಹಾಕಬೇಕು. ಹೀಗೆ ಹಲವು ಸಮಸ್ಯೆಗಳ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಿದರು.

ಈ ಸಂದರ್ಭ ಡಿವೈಎಸ್‌ಪಿ ಜೈಶಂಕರ್ ಅವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.