ಪ್ರಜಾವಾಣಿ ವಾರ್ತೆ
ಉಡುಪಿ: ಅಕ್ರಮವಾಗಿ ಸಂಪತ್ತು ಗಳಿಸುವುದರಿಂದ ಸಂತೋಷ ಸಿಗಲ್ಲ. ನಿದ್ದೆಯೂ ಬರಲ್ಲ. ಕಾನೂನಿನ ಚೌಕಟ್ಟಿನಲ್ಲಿ ಸಾವಿರಾರು ಕೋಟಿ ಬೇಕಾದರೂ ಸಂಪಾದಿಸಿ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು.
ನಗರದ ಕಲ್ಸಂಕದ ಟ್ಟೆಮ್ಸ್ ಸ್ಕ್ವೇರ್ ಬಿಲ್ಡಿಂಗ್‌ನ ಹೊಟೇಲ್ ಓಶಿಯಲ್ ಪರ್ಲ್ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಜಾರ್ಜ್ ಫರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಇಂದು ಶ್ರೀಮಂತಿಕೆ ಮತ್ತು ಅಧಿಕಾರಕ್ಕೆ ಮಣೆ ಹಾಕಲಾಗುತ್ತಿದೆ. ಜೈಲಿನಿಂದ ಬಂದವರಿಗೆ ಹೂವಿನ ಹಾರ ಹಾಕಿ ಸ್ವಾಗತಿಸುವ ಪ್ರವೃತ್ತಿಯನ್ನು ಕಾಣುತ್ತೇವೆ ಎಂದು ಹೇಳಿದರು.
ಎಲ್ಲಾ ಅಕ್ರಮಗಳಿಗೂ ದುರಾಸೆಯೇ ಮೂಲ ಕಾರಣ. ಇರುವುದರಲ್ಲಿ ತೃಪ್ತಿ ಪಡೆದುಕೊಂಡರೆ ದುರಾಸೆ ಬರುವುದಿಲ್ಲ. ಹಿಂದಿನವರು ತಮ್ಮ ಮಕ್ಕಳಿಗೆ ನೀತಿ ಪಾಠ ಹೇಳುತ್ತಿದ್ದರು. ಮಾರ್ಗದರ್ಶನ ನೀಡುತ್ತಿದ್ದರು. ಇಂದು ಗಂಡ, ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ ಅವರಿಗೆ ಮಕ್ಕಳ ವಿಚಾರದಲ್ಲಿ ಹೆಚ್ಚು ಗಮನ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.
ಮಾನವೀಯತೆ ಎಂಬುದು ಹಿರಿಯರು ಕಟ್ಟಿದ ಮೌಲ್ಯ. ಇಂದು ಅದು ಇಲ್ಲವಾಗುತ್ತಿದೆ. ಮಕ್ಕಳಿಗೆ ಮೊದಲು ಮಾನವೀಯತೆಯನ್ನು ಕಲಿಸುವ ಕೆಲಸವಾಗಬೇಕು. ಜೊತೆಗೆ ಸರಿ–ತಪ್ಪು ಹೇಳಿಕೊಡುವ ಪ್ರಯತ್ನವನ್ನು ಪೋಷಕರು ಮಾಡಬೇಕು ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಅವರು ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಕುರಿತು ಸಂಸ್ಮರಣಾ ಭಾಷಣ ಮಾಡಿದರು. ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ ಮಾತನಾಡಿದರು.
ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಬಹುಭಾಷಾ ಚಲನಚಿತ್ರ ನಟ ಸುಮನ್ ತಲ್ವಾರ್ ಪೂಜಾರಿ, ಅದಾನಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಸಂಚಾಲಕ ಕೆ.ಪಿ. ಜಗದೀಶ್ ಅಧಿಕಾರಿ, ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಜಿ.ಟಿ. ಆಚಾರ್ಯ, ಸುರೇಂದ್ರ ಮೆಂಡನ್, ಪ್ರಮುಖರಾದ ದಯಾಸಾಗರ್ ಚೌಟ ಉಪಸ್ಥಿತರಿದ್ದರು.
ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಎಂ. ಶೆಟ್ಟಿ ಸ್ವಾಗತಿಸಿದರು. ಸಂತೋಷ್ ಹೆಗ್ಡೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಭಾಷೆ ಧರ್ಮದ ಆಧಾರದಲ್ಲಿ ನಮ್ಮ ದೇಶವನ್ನು ವಿಭಜಿಸುವ ಪ್ರಯತ್ನಗಳು ಇಂದು ನಡೆಯುತ್ತಿವೆ. ಅದಕ್ಕೆ ಆಸ್ಪದ ನೀಡಬಾರದುಎನ್. ಸಂತೋಷ್ ಹೆಗ್ಡೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.