ADVERTISEMENT

ಉಡುಪಿ: ತಂದೆಯ ಅಂತ್ಯ ಸಂಸ್ಕಾರದಲ್ಲಿ ಭೂಗತ ಪಾತಕಿ ಬನ್ನಂಜೆ ರಾಜ ಭಾಗಿ

​ಪ್ರಜಾವಾಣಿ ವಾರ್ತೆ
Published 4 ಮೇ 2025, 12:37 IST
Last Updated 4 ಮೇ 2025, 12:37 IST
   

ಉಡುಪಿ: ತಂದೆಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹೈಕೋರ್ಟ್ ಅನುಮತಿ ನೀಡಿರುವ ಕಾರಣ ಭೂಗತ ಪಾತಕಿ ಬನ್ನಂಜೆ ರಾಜನನ್ನು ಉಡುಪಿಗೆ ಭಾನುವಾರ ಕರೆ ತರಲಾಯಿತು.

ಬೆಳಗಾವಿಯ ಜೈಲಿನಲ್ಲಿರುವ ಬನ್ನಂಜೆ ರಾಜನನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಮಲ್ಪೆಯ ಕಲ್ಮಾಡಿಯ ಸಸಿತೋಟ ಎಂಬಲ್ಲಿರುವ ಆತನ ಮನೆಗೆ ಕರೆದುಕೊಂಡು ಬಂದಿದ್ದಾರೆ.

ಅಲ್ಲಿ ಆತ ತಂದೆಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದಾನೆ. ಬಳಿಕ ಮಲ್ಪೆ ಹಿಂದೂ ರುದ್ರಭೂಮಿಯಲ್ಲಿ ಆತನ ತಂದೆಯ ಅಂತ್ಯ ಸಂಸ್ಕಾರ ನೆರವೇರಿತು.

ADVERTISEMENT

ಏ.27 ರಂದು ನಿಧನರಾದ ತಂದೆ ಎಂ.ಸುಂದರ್(88) ಅವರ ಅಂತಿಮ ಸಂಸ್ಕಾರ ಹಾಗೂ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ತುರ್ತು ಪೆರೋಲ್ ನೀಡುವಂತೆ ಬನ್ನಂಜೆ ರಾಜ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದನು. ಹೈಕೋರ್ಟ್‌ ಆತನಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಮೇ 3ರಿಂದ ಮೇ 14ರವರೆಗೆ ಪೆರೋಲ್ ನೀಡಿತ್ತು.

‘ತಂದೆಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಬಳಿಕ ಬನ್ನಂಜೆ ರಾಜ ಮನೆಯಿಂದ ಹೊರಗೆ ಬರಬಾರದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಇದೇ 14ರಂದು ಆತನನ್ನು ಮತ್ತೆ ಬೆಳಗಾವಿಯ ಜೈಲಿಗೆ ಕರೆದೊಯ್ಯಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ.ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.