
ಡಾ.ಬಿ.ಬಿ ಹೆಗ್ಡೆ ಕಾಲೇಜಿನ ಬಿಎಂಎಸ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮ | ಶಿಕ್ಷಕರು ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣ ಆಗಬೇಕು | ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಸುಕುಮಾರ್ ಶೆಟ್ಟಿ
ಕುಂದಾಪುರ: ರಾಜಕಾರಣ ಸೇರಿದಂತೆ ಬಹುತೇಕ ಕ್ಷೇತ್ರಗಳು ಅಸ್ತಿತ್ವ ಕಳೆದುಕೊಳ್ಳುತ್ತಿದ್ದು ಶಿಕ್ಷಣ ಕ್ಷೇತ್ರ ಮಾತ್ರ ಈಗಲೂ ಪವಿತ್ರವಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಇಲ್ಲಿನ ಡಾ.ಬಿ.ಬಿ ಹೆಗ್ಡೆ ಕಾಲೇಜಿನ ಬಿಎಂಎಸ್ ಕ್ರೀಡಾಂಗಣದಲ್ಲಿ ನಡೆದ ಕುಂದಾಪುರ ಎಜುಕೇಷನ್ ಸೊಸೈಟಿಯ ಸುವರ್ಣ ಮಹೋತ್ಸವದ ಕೊನೆಯ ದಿನವಾದ ಬುಧವಾರ ಬೋಧಕ- ಬೋಧಕೇತರ ವರ್ಗದವರ ಸಮ್ಮಿಲನದಲ್ಲಿ ಅವರು ಮಾತನಾಡಿದರು.
ಶಿಕ್ಷಕ ವೃತ್ತಿಯಿಂದ ಸಮಾಜ ಸುಧಾರಣೆಯ ಕೆಲಸಗಳಾಗುತ್ತಿವೆ. ಸಮಾಜದ ಆಸ್ತಿಗಳಾಗಿರುವ ಶಿಕ್ಷಕರು ಮಾನಸಿಕ ನೆಮ್ಮದಿಯಿಂದ ಕೆಲಸ ಮಾಡುವುದು ಮುಖ್ಯ. ಇದರ ನಿರ್ವಹಣೆ ಮಾಡುವುದು ಆಡಳಿತ ಮಂಡಳಿ, ಸರ್ಕಾರ ಮತ್ತು ಸಮಾಜದ ಜವಾಬ್ದಾರಿ ಎಂದು ಅವರು ಹೇಳಿದರು.
ಶಿಕ್ಷಣ ಸಂಸ್ಥೆ ಕಟ್ಟುವುದು ದೊಡ್ಡ ಕೆಲಸವಲ್ಲ. ಕಟ್ಟಿದ ಸಂಸ್ಥೆಯನ್ನು ಜನಮಾನಸದಲ್ಲಿ ಚಿರಸ್ಥಾಯಾಗಿರುವಂತೆ ಮುನ್ನಡೆಸುವುದು ಮುಖ್ಯ. ರಾಷ್ಟ್ರಪತಿ, ಪ್ರಧಾನಿಯಂತಹ ಉನ್ನತ ವ್ಯಕ್ತಿಗಳನ್ನು ರೂಪಿಸುವ ಶ್ರೇಷ್ಠ ಕೆಲಸ ಶಿಕ್ಷಕರದ್ದು. ಸಮಾಜ, ರಾಜ್ಯ, ಪ್ರಜೆಗಳ ಕಾಳಜಿ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಹುಬ್ಬಳ್ಳಿಯ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಹಾಗೂ ಖಾಸಗಿತನ ಅಭದ್ರತೆ ಕಾರಣಗಳಿಗಾಗಿ ಶಿಕ್ಷಣ ಕ್ಷೇತ್ರದಲ್ಲಿ ನೆಟ್‌ವರ್ಕ್ ಸಮಸ್ಯೆ ದೂರ ಮಾಡುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದರು.
ಸೊಸೈಟಿ ಅಧ್ಯಕ್ಷ ಬಿ.ಎಂ. ಸುಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಜೊತೆ ಕಾರ್ಯದರ್ಶಿ ಕೆ.ಸುಧಾಕರ ಶೆಟ್ಟಿ ಬಾಂಡ್ಯ, ಡಾ.ಬಿ.ಬಿ ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ಡಾ.ಉಮೇಶ್ ಶೆಟ್ಟಿ ಕೊತ್ತಾಡಿ, ಆರ್.ಎನ್.ಶೆಟ್ಟಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್ ಕುಮಾರ್ ಶೆಟ್ಟಿ, ವಿಕೆಆರ್ ಆಚಾರ್ಯ ಮತ್ತು ಎಚ್‌ಎಂಎಂ ಶಾಲೆಗಳ ಚಿಂತನಾ ರಾಜೇಶ್ ಇದ್ದರು.
ವಿಕೆಆರ್ ಆಚಾರ್ಯ ಮತ್ತು ಹೆಚ್ ಎಂಎಂ ಶಾಲೆಗಳು ಹಾಗೂ ಆರ್.ಎನ್.ಶೆಟ್ಟಿ ಕಾಲೇಜಿನಲ್ಲಿ 20 ವರ್ಷಗಳಿಗೂ ಹೆಚ್ಚು ಸೇವೆ ಸಲ್ಲಿಸಿದ ಶಿಕ್ಷಕರು, ಉಪನ್ಯಾಸಕರು ಹಾಗೂ ಬೋಧಕೇತರನ್ನು ಗೌರವಿಸಲಾಯಿತು. ಸುವರ್ಣ ಮಹೋತ್ಸವ ಅಂಗವಾಗಿ ಸಿಬ್ಬಂದಿಗಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ದೀಪಾ ಪೂಜಾರಿ ಸ್ವಾಗತಿಸಿದರು. ಮಹೇಶ್ ನಾಯ್ಕ್ ವಂದಿಸಿದರು. ಪ್ರವೀಣ್ ಮೊಗವೀರ ಗಂಗೊಳ್ಳಿ, ನಂದಾ ರೈ ಪರಿಚಯಿಸಿದರು. ಶ್ವೇತಾ ಭಂಡಾರಿ ನಿರೂಪಿಸಿದರು. ಗ್ರಂಥಪಾಲಕ ಮಹೇಶ್ ನಾಯ್ಕ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.