ಉಡುಪಿ: ದೌರ್ಜನ್ಯಕ್ಕೊಳಗಾಗುವ ದಲಿತ ಸಮುದಾಯದವರಿಗೆ ತುರ್ತಾಗಿ ಪುನರ್ವಸತಿ ಕಲ್ಪಿಸಬೇಕು. ಈ ಕೆಲಸ ಜಿಲ್ಲೆಯಲ್ಲಿ ಆಗುತ್ತಿಲ್ಲ ಎಂದು ದಲಿತ ಮುಖಂಡರು ಆರೋಪಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಕುಂದಾಪುರದಲ್ಲಿ ಔಷಧಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ದಲಿತ ಸಮುದಾಯದ ಯುವತಿಗೆ ಮಹಿಳೆಯೊಬ್ಬರು ಹಲ್ಲೆ ನಡೆಸಿದ ಪ್ರಕರಣದಲ್ಲಿ ಹಲ್ಲೆಯಿಂದ ಚೇತರಿಸಿಕೊಂಡಿರುವ ಯುವತಿ ಪುನರ್ವಸತಿಗಾಗಿ ಅರ್ಜಿ ಹಾಕಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನೌಕರಿ ಕೊಡಿಸಬೇಕೆಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲಎಂದು ಮುಖಂಡರು ಸಭೆಯಲ್ಲಿ ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ, ಈ ವಿಚಾರವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ದಲಿತ ಮಖಂಡ ಉದಯ್ ಕುಮಾರ್ ಮಾತನಾಡಿ, ಕೆಲವು ಜಾತಿ ನಿಂದನೆ ಪ್ರಕರಣದಲ್ಲಿ ಪೊಲೀಸರು ಬಿ ರಿಪೋರ್ಟ್ ಹಾಕಿದ್ದಾರೆ. ಯಾವ ಆಧಾರದಲ್ಲಿ ಬಿ ರಿಪೋರ್ಟ್ ಹಾಕಲಾಗಿದೆ ಎಂದು ಪ್ರಶ್ನಿಸಿದರು. ದೌರ್ಜನ್ಯಕ್ಕೆ ಒಳಗಾದವರ ವಿರುದ್ಧವೇ ಪ್ರತಿದೂರು ದಾಖಲಿಸಲಾಗುತ್ತಿದೆ ಈ ವ್ಯವಸ್ಥೆ ಬದಲಾಗಬೇಕು ಎಂದೂ ಹೇಳಿದರು.
ನಮ್ಮ ಹಕ್ಕು ಕೇಳಲು ಸಂವಿಧಾನಬದ್ಧವಾಗಿ ಧರಣಿ ನಡೆಸಿದರೆ ಪೊಲೀಸರು ನೋಟಿಸ್ ಕೊಡುತ್ತಾರೆ ಈ ಕುರಿತು ಎಸ್‌ಪಿಯವರು ಗಮನ ಹರಿಸಬೇಕು ಎಂದೂ ಅವರು ತಿಳಿಸಿದರು.
ಇಂತಹ ಸಭೆಗೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಮತ್ತು ಸರ್ಕಾರಿ ವಕೀಲರನ್ನು ಕರೆಯಬೇಕಿತ್ತು ಎಂದು ಮಂಜುನಾಥ ಬಾಳೆಕುದ್ರು ಹೇಳಿದರು.
ಅಂಬಲಪಾಡಿಯಲ್ಲಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆಗೆ ನಾಮ ಫಲಕವೇ ಇಲ್ಲ. ಆ ಕಚೇರಿಯನ್ನು ಹುಡುವುದೇ ಕಷ್ಟವಾಗಿದೆ ಎಂದು ಕೆಲವು ಮುಖಂಡರು ತಿಳಿಸಿದರು.
ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವುದಕ್ಕೆ ಸಂಬಂಧಿಸಿ ಹಲವು ದೂರುಗಳನ್ನು ಈ ಠಾಣೆಗೆ ನೀಡಲಾಗಿದೆ ಏನೂ ಕ್ರಮ ಕೈಗೊಂಡಿಲ್ಲ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ, ಈ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಹುದ್ದೆ ಖಾಲಿ ಇದೆ. ಹುದ್ದೆ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಂಕರನಾರಾಯಣ ಠಾಣಾ ವ್ಯಾಪ್ತಿಯಲ್ಲಿ ದಲಿತರ ₹ 3 ಕೋಟಿ ಹಣ ದುರ್ಬಳಕೆಯಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಇಲ್ಲದ ಜಾಗದಲ್ಲಿ ರಸ್ತೆ ಮಾಡಲಾಗಿದೆ. 7 ವರ್ಷದ ಹಿಂದೆಯೇ ದೂರು ದಾಖಲಾಗಿದ್ದರೂ ಇನ್ನು ಕ್ರಮ ಕೈಗೊಂಡಿಲ್ಲ ಎಂದು ಕೆಲವರು ತಿಳಿಸಿದರು.
ಸಹಕಾರ ಸಂಘಗಳ ಉಪನಿಬಂಧಕರಿಗೆ ಯಾವುದೇ ದೂರುಗಳನ್ನು ನೀಡಿದರೂ ಸ್ಪಂದಿಸುವುದಿಲ್ಲ ಎಂದು ಗಂಗೊಳ್ಳಿ ಗ್ರಾಮದ ರಾಘವೇಂದ್ರ ಅವರು ದೂರಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ ನಾಯಕ್, ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
‘ಜಿಲ್ಲಾಧಿಕಾರಿಯೂ ಸಭೆ ನಡೆಸಲಿ’
ಹೊಸ ಜಿಲ್ಲಾಧಿಕಾರಿ ಬಂದ ಬಳಿಕ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕುಂದು ಕೊರತೆ ಸಭೆ ನಡೆಸಿಲ್ಲ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕುಂದು ಕೊರತೆ ಸಭೆ ನಡೆದು ಹಲವು ತಿಂಗಳುಗಳಾಯಿತು ಎಂದು ದಲಿತ ಮುಖಂಡರು ಸಭೆಯಲ್ಲಿ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ವಿಚಾರವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಪೊಲೀಸ್ ಠಾಣೆಗಳಲ್ಲೂ ಕುಂದು ಕೊರತೆ ಸಭೆಗಳು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದವರು ವಾಸಿಸುವಲ್ಲಿಗೆ ಬೀಟ್ ಪೊಲೀಸರು ಬರುತ್ತಿಲ್ಲ. ವಾರದಲ್ಲಿ ಕನಿಷ್ಠ ಎರಡು ಬಾರಿಯಾದರೂ ಬೀಟ್ ಪೊಲೀಸರು ಬಂದರೆ ಉತ್ತಮ. ನಮ್ಮ ಸಮಸ್ಯೆಗಳು ಅವರ ಗಮನಕ್ಕೆ ಬರುತ್ತದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.