ADVERTISEMENT

ಉಡುಪಿ| ಕನಿಷ್ಠ ಕೂಲಿ ನೀಡದ ಮಾಲೀಕರು: ಬೀಡಿ ಫೆಡರೇಶನ್ ಆರೋಪ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 4:43 IST
Last Updated 10 ನವೆಂಬರ್ 2025, 4:43 IST
ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಎಂಟನೇ ಸಮ್ಮೇಳನ ಭಾನುವಾರ ಜರುಗಿತು
ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಎಂಟನೇ ಸಮ್ಮೇಳನ ಭಾನುವಾರ ಜರುಗಿತು   

ಉಡುಪಿ: ‘ಬೀಡಿ ಕಾರ್ಮಿಕರಿಗಾಗಿ ಸರ್ಕಾರ ನಿಗದಿ ಮಾಡಿದ ತುಟ್ಟಿಭತ್ಯೆ, ಕನಿಷ್ಠ ಕೂಲಿಯನ್ನು ಕಾರ್ಮಿಕರಿಗೆ ಕೊಡಲು ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಬೀಡಿ ಫೆಡರೇಶನ್ ರಾಜ್ಯ ಘಟಕ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಆರೋಪಿಸಿದರು.

ನಗರದ ವಿಮಾ ನೌಕರರ ಸಂಘದ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ 8ನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರ ನಿಗದಿ ಮಾಡಿದ ₹301 ಕನಿಷ್ಠ ವೇತನ ನೀಡದೇ ₹287 ನೀಡುತ್ತೇವೆ ಎಂದು ಹೇಳಿ ಅದನ್ನೂ ಕಾರ್ಮಿಕರಿಗೆ ಮಾಲೀಕರು ನೀಡುತ್ತಿಲ್ಲ. ಆದ್ದರಿಂದ ಕಾರ್ಮಿಕರು ಮುಂದಿನ ದಿನಗಳಲ್ಲಿ ನಿರ್ಣಾಯಕವಾದ ಹೋರಾಟಕ್ಕೆ ಮುಂದಾಗಬೇಕು’ ಎಂದರು.

ADVERTISEMENT

‘ನಮ್ಮನ್ನು ಅಳುವ ಸರ್ಕಾರದ ಪ್ರತಿನಿಧಿಗಳು, ಶಾಸಕರು, ಸಂಸದರು ಯಾರು ಕೂಡ ಅಧಿವೇಶನದಲ್ಲಿ ಬೀಡಿ ಕಾರ್ಮಿಕರ ಬಗ್ಗೆ ಮಾತನಾಡುವುದಿಲ್ಲ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 3 ಲಕ್ಷಕ್ಕೂ ಮಿಕ್ಕಿ ಬೀಡಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಇದೇ 24 ರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ರಾತ್ರಿ ಹೋರಾಟ ಮತ್ತು 28 ರಂದು ಸಹಾಯಕ ಆಯುಕ್ತರ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಬೀಡಿ ಫೆಡರೇಶನ್ ಉಪಾಧ್ಯಕ್ಷೆ ಬಲ್ಕೀಸ್, ಕಾರ್ಕಳ ತಾಲ್ಲೂಕು ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷೆ ಸುನೀತಾ ಶೆಟ್ಟಿ, ಜನವಾದಿ ಮಹಿಳಾ ಸಂಘದ ಕಾರ್ಯದರ್ಶಿ ಶೀಲಾವತಿ, ಉಡುಪಿ ಬೀಡಿ ಸಂಘದ ಅಧ್ಯಕ್ಷೆ ನಳಿನಿ ಎಸ್. ಉಪಸ್ಥಿತರಿದ್ದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಬೀಡಿ ಫೆಡರೇಶನ್ ಅಧ್ಯಕ್ಷರಾದ ಮಹಾಬಲ ವಡೇಯರಹೊಬಳಿ ವಹಿಸಿದ್ದರು. ಫೆಡರೇಶನ್ ಕಾರ್ಯದರ್ಶಿ ಉಮೇಶ್ ಕುಂದರ್ ಸ್ವಾಗತಿಸಿದರು. ಕವಿರಾಜ್. ಎಸ್.ಕಾಂಚನ್ ವಂದಿಸಿದರು.

ಸಮ್ಮೇಳನದಲ್ಲಿ ಮುಂದಿನ ಮೂರು ವರ್ಷದ ಅವಧಿಗೆ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್‌ನ 15 ಜನರ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಉಮೇಶ್ ಕುಂದರ್, ಪ್ರಧಾನ ಕಾರ್ಯದರ್ಶಿಯಾಗಿ ಕವಿರಾಜ್ ಎಸ್.ಕಾಂಚನ್, ಕೋಶಾಧಿಕಾರಿಯಾಗಿ ಬಲ್ಕೀಸ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.