ADVERTISEMENT

ಬೆಳ್ವೆ ಗುಮ್ಮಹೊಲ ವಿವಾದ: ಉಡುಪಿ ಧರ್ಮಪ್ರಾಂತ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 14:35 IST
Last Updated 25 ಅಕ್ಟೋಬರ್ 2021, 14:35 IST

ಉಡುಪಿ: ಬೆಳ್ವೆ ಗುಮ್ಮಹೊಲದ ಸಂತ ಜೋಸೆಫ್ ಅಗ್ರಿಕಲ್ಚರ್ ಕಾಲೊನಿಯ ಜನರು ಚರ್ಚ್‍ನ ಧರ್ಮಗುರು ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದು, ಇವುಗಳಲ್ಲಿ ಸತ್ಯಕ್ಕೆ ದೂರವಾದ ಹಲವು ವಿಷಯಗಳಿದ್ದು ಸತ್ಯವನ್ನು ಜನರ ಮುಂದಿರಿಸಲು ಉಡುಪಿ ಧರ್ಮಪ್ರಾಂತ ಬಯಸುತ್ತಿದೆ ಎಂದು ಚರ್ಚ್‌ನ ಸಿಬ್ಬಂದಿ ತಿಳಿಸಿದ್ದಾರೆ.

ಗೇಟ್‍ಗೆ ಬೀಗ ಹಾಕಿ ಭಕ್ತರನ್ನು ಚರ್ಚ್‌ ಪ್ರವೇಶಿಸದಂತೆ ತಡೆಯಲಾಯಿತು ಎಂಬ ವರದಿ ಸತ್ಯಕ್ಕೆ ದೂರವಾಗಿದ್ದು, ಭಾನುವಾರ ಚರ್ಚ್‍ನಲ್ಲಿ ಎಂದಿನಂತೆ ಪೂಜೆಗಳು ನಡೆದು ಭಕ್ತರು ಭಾಗವಹಿಸಿದ್ದಾರೆ. ಜುಲೈನಲ್ಲಿ ಬೆಳ್ವೆ ಕಾಲೊನಿಯ ಹೊಸ ನಿರ್ದೇಶಕರಾಗಿ ನೇಮಕಗೊಂಡ ಧರ್ಮಗುರುಗಳು ಇಕ್ಕಟ್ಟಾಗಿದ್ದ ಶೌಚಾಲಯ ಮತ್ತು ಕಚೇರಿಯನ್ನು ವಿಸ್ತರಿಸಲು ಧರ್ಮಪ್ರಾಂತದ ಬಿಷಪ್ ಅವರ ಲಿಖಿತ ಅನುಮತಿ ಪಡೆದು, ಒಂದು ಗೋಡೆಯನ್ನು ಕೆಡವಿಸಿ ಹೊಸ ಗೋಡೆಯನ್ನು ಕಟ್ಟಿಸುತ್ತಿದ್ದು, ಚರ್ಚ್ ಕಟ್ಟಡ ಅಥವಾ ಇತರ ಭಾಗಗಳಿಗೆ ಹಾನಿಯಾಗಿಲ್ಲ.

ಅ.5ರಂದು ಬೆಳ್ವೆಯ ಪ್ರತಿನಿಧಿಗಳು ಹಾಗೂ ಧರ್ಮಪ್ರಾಂತದ ಆಡಳಿತ ಮಂಡಳಿಯು ಉಡುಪಿಯ ಬಿಷಪ್‌ ನಿವಾಸದಲ್ಲಿ ಸಭೆ ನಡೆಸಿದ್ದು, ಧರ್ಮಗುರುಗಳ ವರ್ಗಾವಣೆ ಬಿಟ್ಟು ಎಲ್ಲ ಬೇಡಿಕೆಗಳನ್ನು ಕೈಬಿಟ್ಟಿರುವುದಾಗಿ ಬೆಳ್ವೆಯ ಪ್ರತಿನಿಧಿಗಳು ಲಿಖಿತವಾಗಿ ತಿಳಿಸಿದ್ದಾರೆ. ಗುಮ್ಮಹೊಲ ಬೆಳ್ವೆಯ ಸಂತ ಜೋಸೆಫ್ ಅಗ್ರಿಕಲ್ಚರಲ್ ಕಾಲೊನಿಯ ಬೇಡಿಕೆಗೆ ಸಂಬಂಧಪಟ್ಟಂತೆ, ಯಾವುದೇ ಚರ್ಚ್‌ಗೆ, ಸಂಸ್ಥೆಗೆ, ಕಾಲೊನಿಗೆ, ಗುರುಗಳನ್ನು ಅಥವಾ ನಿರ್ದೇಶಕರನ್ನು ನೇಮಿಸುವ, ವರ್ಗಾಯಿಸುವ ಪರಮಾಧಿಕಾರ ಧರ್ಮಪ್ರಾಂತದ ಮುಖ್ಯಸ್ಥ ಬಿಷಪ್ ಅವರಿಗೆ ಸೇರಿದೆ.

ADVERTISEMENT

ಕೆಥೋಲಿಕ್‌ ಧರ್ಮಸಭೆಯ ಹಾಗೂ ಧರ್ಮಪ್ರಾಂತದ ನಿಯಮಗಳ ಪ್ರಕಾರ ಎಲ್ಲವೂ ನಡೆಯುತ್ತದೆ. ಬೆಳ್ವೆಯ ಕ್ರೈಸ್ತರು ಈ ಬಗ್ಗೆ ತಿಳಿದಿದ್ದರೂ, ಸಮುದಾಯಕ್ಕೆ ಸಂಬಂಧಪಡದ ಜನರಿಗೆ ತಪ್ಪು ಮಾಹಿತಿ ನೀಡಿ ಗುಂಪುಗೂಡಿಸಿ ಪ್ರತಿಭಟಿಸಿದ್ದು, ಕ್ರೈಸ್ತ ಧರ್ಮವನ್ನು ತ್ಯಜಿಸುತ್ತೇವೆ ಎಂದು ಬೆದರಿಕೆ ಹಾಕಿರುವುದು ವಿಷಾದನೀಯ. ಗುಮ್ಮಹೊಲ ಬೆಳ್ವೆಯ ಕ್ರೈಸ್ತರು ಚರ್ಚ್‍ಗೆ ಪ್ರವೇಶಿಸಲು, ಪ್ರಾರ್ಥನೆ-ಪೂಜೆಗಳಲ್ಲಿ ಭಾಗವಹಿಸಲು ಅಡ್ಡಿ ಇಲ್ಲ. ಪ್ರಸ್ತುತ ಧರ್ಮಗುರುಗಳು ಸೂಚನೆ ನೀಡಿದ್ದರೆ ಅವು, ಚರ್ಚ್‍ನ ಶಿಸ್ತು ಪಾಲನೆಯ ಭಾಗವಾಗಿವೆ.

ಬೆಳ್ವೆ ಸಂತ ಜೋಸೆಫರ ಅಗ್ರಿಕಲ್ಚರಲ್ ಕಾಲೊನಿಯ ಭಕ್ತರು ಒಳಗಿನ ಹಾಗೂ ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವಕ್ಕೆ ಹಾಗೂ ಸುಳ್ಳು ಮಾಹಿತಿಗಳಿಗೆ ಬಲಿಯಾಗಬಾರದು ಎಂದು ಧರ್ಮಪ್ರಾಂತದ ಆಡಳಿತ ಮಂಡಳಿ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.