ADVERTISEMENT

ವಾಟ್ಸ್‌ಆ್ಯಪ್‌ ಯುಗದಲ್ಲೂ ಗೀತೆ ಪ್ರಸ್ತುತ: ಇಸ್ಕಾನ್‌ ಮುಖ್ಯಸ್ಥ ಗೌರಂಗದಾಸ್‌

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 5:13 IST
Last Updated 22 ಆಗಸ್ಟ್ 2025, 5:13 IST
ಇಸ್ಕಾನ್‌ ಮುಖ್ಯಸ್ಥ ಗೌರಂಗದಾಸ್‌ ಅವರು ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಗಳು ಉಪಸ್ಥಿತರಿದ್ದರು
ಇಸ್ಕಾನ್‌ ಮುಖ್ಯಸ್ಥ ಗೌರಂಗದಾಸ್‌ ಅವರು ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಗಳು ಉಪಸ್ಥಿತರಿದ್ದರು   

ಉಡುಪಿ: ಇಂದಿನ ವಾಟ್ಸ್‌ಆ್ಯಪ್‌ ಯುಗದಲ್ಲೂ ಭಗವದ್ಗೀತೆ ಪ್ರಸ್ತುತವಾಗಿದೆ. ಗೀತೆಯ ಸಂದೇಶವನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಇಸ್ಕಾನ್‌ ಮುಖ್ಯಸ್ಥ ಗೌರಂಗದಾಸ್‌ ಹೇಳಿದರು.

ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಬ್ರಿಟಿಷರು ನಮ್ಮ ದೇಶವನ್ನು 300 ವರ್ಷಗಳ ಕಾಲ ಆಳ್ವಿಕೆ ಮಾಡಿದರು. ನಮ್ಮಲ್ಲಿದ್ದ ಚಿನ್ನ, ವಜ್ರ, ವೈಡೂರ್ಯ ಎಲ್ಲವನ್ನೂ ಲೂಟಿ ಮಾಡಿದರು. ಆದರೆ ಇವೆಲ್ಲವುಗಳಿಗಿಂತಲೂ ನಮ್ಮ ದೇಶದ ಅಮೂಲ್ಯ ವಸ್ತು ಭಗವದ್ಗೀತೆಯಾಗಿದೆ ಎಂದರು.

ADVERTISEMENT

ಇಸ್ಕಾನ್‌ ಸಂಸ್ಥೆಯು ಹಲವು ವರ್ಷಗಳಿಂದ 55 ಕೋಟಿಗೂ ಅಧಿಕ ಭಗವದ್ಗೀತೆ ಪುಸ್ತಕವನ್ನು 80 ಭಾಷೆಗಳಲ್ಲಿ ವಿತರಿಸಿದೆ ಎಂದು ಹೇಳಿದರು.

ಸನಾತನ ಧರ್ಮವನ್ನು ಜಗದಗಲ ಪಸರಿಸುವ ಕಾರ್ಯವನ್ನು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾಡುತ್ತಿದ್ದಾರೆ. ಕೋಟಿ ಗೀತಾ ಲೇಖನ ಯಜ್ಞದ ಮೂಲಕ ಅವರು ಪ್ರತಿಯೊಬ್ಬರೂ ಭಗವದ್ಗೀತೆಯ ಸಂದೇಶವನ್ನು ಬರೆಯುವಂತೆ ಮಾಡಿ ಅವರಿಗೆ ಕೃಷ್ಣನ ಸಂದೇಶವನ್ನು ಮುಟ್ಟಿಸುವ ಮಹತ್ಕಾರ್ಯವನ್ನು ಮಾಡಿದ್ದಾರೆ ಎಂದರು.

ಭಗವದ್ಗೀತೆಯ ಸಂದೇಶವನ್ನು ಅರಿತುಕೊಳ್ಳುವುದು ಇಂದು ಅಗತ್ಯವಾಗಿದೆ. ಗೀತಾ ಲೇಖನ ಯಜ್ಞವು ನೂರಾರು ಕುಟುಂಬಗಳನ್ನು ಸಾಮಾಜಿಕ ಮಾಧ್ಯಮಗಳಿಂದ ದೂರವಿರಿಸುವ ಕೆಲಸವನ್ನು ಮಾಡಿದೆ ಇದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಇಂದು ಮಕ್ಕಳ ಕಾಲೇಜು ಶಿಕ್ಷಣದ ಬಗ್ಗೆ ಪೋಷಕರು ಹೆಚ್ಚು ಚಿಂತಿತರಾಗಿದ್ದಾರೆ. ತಮ್ಮ ಮಕ್ಕಳು ಯಾವ ಪದವಿಯನ್ನು ಪಡೆಯಬೇಕು ಎನ್ನುವುದರ ಬಗ್ಗೆ ಹೆಚ್ಚು ಕಳಕಳಿ ಹೊಂದಿದ್ದಾರೆ. ಶಿಕ್ಷಣ ಪಡೆದು ಉತ್ತಮ ಉದ್ಯೋಗವನ್ನು ಪಡೆದು ಬದುಕಿನ ಸಮಸ್ಯೆಯನ್ನು ಪರಿಹರಿಸಲು ಇದರಿಂದ ಸಾಧ್ಯ. ಜೊತೆಗೆ ಅಧ್ಯಾತ್ಮವನ್ನೂ ಅರಿತುಕೊಳ್ಳಬೇಕು ಎಂದರು.

ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕಿರಿಯ ಯತಿ ಸುಶ್ರೀಂದ್ರತೀರ್ಥ ಸ್ವಾಮೀಜಿ ಇದ್ದರು.

ಅದಕ್ಕೂ ಮೊದಲು ಗೌರಂಗದಾಸ್ ಅವರನ್ನು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಬರಮಾಡಿಕೊಂಡು ಕೃಷ್ಣ ದರ್ಶನ ಮಾಡಿಸಿದರು.

ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.