ADVERTISEMENT

ಭಾರತ ಬಂದ್‌ ನೀರಸ: ವಹಿವಾಟು ಅಬಾಧಿತ

ಕೇಂದ್ರ ಸರ್ಕಾರದ ವಿರುದ್ಧ ಹಲವು ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 16:04 IST
Last Updated 27 ಸೆಪ್ಟೆಂಬರ್ 2021, 16:04 IST
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಕರೆನೀಡಿದ್ದ ಭಾರತ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಕರೆನೀಡಿದ್ದ ಭಾರತ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.   

ಉಡುಪಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಕರೆನೀಡಿದ್ದ ಭಾರತ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಖಾಸಗಿ ಬಸ್‌ಗಳ ಸಂಚಾರ ಎಂದಿನಂತಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಹಾಗೂ ಆಟೊಗಳ ಸಂಚಾರವೂ ಇದ್ದಿದ್ದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಲಿಲ್ಲ. ಹೂ, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಮಾರುಕಟ್ಟೆ ತೆರೆದಿತ್ತು. ನಗರದಲ್ಲಿ ವಾಹನಗಳ ಹಾಗೂ ಜನರ ಸಂಚಾರವೂ ಹೆಚ್ಚಾಗಿರುವುದು ಕಂಡುಬಂತು.

ಮಾಲ್‌ಗಳು, ಹೋಟೆಲ್, ರೆಸ್ಟೋರೆಂಟ್‌ಗಳು ಸೇರಿದಂತೆ ಪ್ರಮುಖ ವಾಣಿಜ್ಯ ಮಳಿಗೆಗಳು, ಬ್ಯಾಂಕ್‌ಗಳು ತೆರೆದಿದ್ದವು. ಗ್ರಾಹಕರಿಗೆ ಬಂದ್‌ ಬಿಸಿ ತಟ್ಟಲಿಲ್ಲ. ಆದರೆ, ಕೆಲವು ಸಂಘಟನೆಗಳು ಬಂದ್‌ಗೆ ಬಾಹ್ಯ ಬೆಂಬಲ ನೀಡಿದ್ದವು.

ADVERTISEMENT

ಸಿಐಟಿಯು, ಎಸ್‌ಡಿಪಿಐ ಸೇರಿದಂತೆ ರೈತ, ದಲಿತ, ಕಾರ್ಮಿಕ, ಮಹಿಳಾ ಹಾಗೂ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಕೃಷಿ ಕಾಯ್ದೆಗೆ ತಿದ್ದುಪಡಿ, ವಿದ್ಯುತ್ ಬಿಲ್ ತಿದ್ದುಪಡಿ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಜೋಡುಕಟ್ಟೆಯಿಂದ ಹುತಾತ್ಮ ಸ್ಮಾರಕದವರೆಗೂ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹುತಾತ್ಮರ ಸ್ಮಾರದ ಎದುರು ಜನವಿರೋಧಿ ನೀತಿಗಳನ್ನು ಮುಖಂಡರು ಖಂಡಿಸಿದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಖಜಾಂಚಿ ಶಶಿಧರ ಗೊಲ್ಲ, ತಾಲ್ಲೂಕು ಕಾರ್ಯದರ್ಶಿ ಕವಿರಾಜ್‌, ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್‌, ಅಂಗನವಾಡಿ ನೌಕರರ ಸಂಘದ ಪ್ರದಾನ ಕಾರ್ಯದರ್ಶಿ ಸುಶೀಲಾ ನಾಡ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಕಾಂಚನ್‌, ಜಿಲ್ಲಾ ಮುಸ್ಲಿಂ ಒಕ್ಕೂಟದ ಉಪಾಧ್ಯಕ್ಷ ಇದ್ರೀಸ್ ಹೂಡೆ, ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಎರ್ಮಾಳ್ ಶಶಿಧರ್ ಶೆಟ್ಟಿ, ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೆರಾ, ಗಣೇಶ್ ನೇರ್ಗಿ, ಮಜೀದ್ ಉಚ್ಚಿಲ, ಸೈಯದ್ ಅಕ್ರಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.