ADVERTISEMENT

ಬ್ರಹ್ಮಾವರ: ವಿವಿಧೆಡೆ ಯೋಗ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 2:25 IST
Last Updated 23 ಜೂನ್ 2022, 2:25 IST
ಜಿ.ಎಂ.ವಿದ್ಯಾನಿಕೇತನದಲ್ಲಿ ನಡೆದ ಯೋಗ ದಿನಾಚರಣೆ (ಎಡಚಿತ್ರ) ಬ್ರಹ್ಮಾವರದ ಕ್ರಾಸ್ಲ್ಯಾಂಡ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಉಪನ್ಯಾಸಕಿ ಮಂಜುಶ್ರೀ ವಿದ್ಯಾರ್ಥಿಗಳಿಗೆ ಯೋಗಾಸನಗಳನ್ನು ತಿಳಿಸಿದರು
ಜಿ.ಎಂ.ವಿದ್ಯಾನಿಕೇತನದಲ್ಲಿ ನಡೆದ ಯೋಗ ದಿನಾಚರಣೆ (ಎಡಚಿತ್ರ) ಬ್ರಹ್ಮಾವರದ ಕ್ರಾಸ್ಲ್ಯಾಂಡ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಉಪನ್ಯಾಸಕಿ ಮಂಜುಶ್ರೀ ವಿದ್ಯಾರ್ಥಿಗಳಿಗೆ ಯೋಗಾಸನಗಳನ್ನು ತಿಳಿಸಿದರು   

ಬ್ರಹ್ಮಾವರ: ಐರೋಡಿ ಗೋಳಿಬೆಟ್ಟು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬ್ರಹ್ಮಾವರದ ಕ್ರಾಸ್‌ಲ್ಯಾಂಡ್‌ ಪದವಿ ಮತ್ತು ಪದವಿ ಪೂರ್ವ ಕಾಲೇಜು, ಹಾರಾಡಿಯ ಜಿ.ಎಂ. ಸ್ಕೂಲ್‌ನಲ್ಲಿ ಮಂಗಳವಾರ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

ಐರೋಡಿ ಗೋಳಿಬೆಟ್ಟು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವ ಯೋಗ ದಿನದ ಯೋಗಾಸನಗಳನ್ನು ಕುಸುಮಾ ಮನೋಜ್ ಕುಮಾರ್ ಅವರ ನೇತೃತ್ವದಲ್ಲಿ ಮಾಡಲಾಯಿತು. ಇದೇ ಸಂದರ್ಭ ಶಾಲಾ ಮಕ್ಕಳ ಬಿಸಿಯೂಟ ಯೋಜನೆಗೆ ಅಗತ್ಯವಾದ ಮಿಕ್ಸಿಯನ್ನು ಸಾಸ್ತಾನ ಸಿ.ಎ ಬ್ಯಾಂಕ್‌ನ ಉಪಾಧ್ಯಕ್ಷ ಆನಂದ ಗಾಣಿಗ ಶಾಲೆಗೆ ಕೊಡುಗೆಯಾಗಿ ನೀಡಿದರು. ವಿಜಯ ಪೂಜಾರಿ, ಗಂಗಾಧರ ಪೂಜಾರಿ, ಉಮೇಶ್ ಪೂಜಾರಿ ಅವರು ನೀಡಿದ ಚಿತ್ರಕಲಾ ಕಲಿಕಾ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯ ಸುಧಾಕರ ಪೂಜಾರಿ, ಎಸ್‌.ಡಿ.ಎಂ.ಸಿ ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷ ವಿಜಯ ಪೂಜಾರಿ, ಮನೋಜ್ ಕುಮಾರ್, ಸದಸ್ಯರಾದ ರಮೇಶ್ ಕುಲಾಲ್, ಶಿಕ್ಷಕ ಮಹೇಶ್, ಸಹಶಿಕ್ಷಕಿ ಭವಾನಿ, ಗೌರವ ಶಿಕ್ಷಕಿ ಅರ್ಚನಾ ಇದ್ದರು.

ADVERTISEMENT

ಕ್ರಾಸ್‌ಲ್ಯಾಂಡ್‌ ಕಾಲೇಜು: ಬ್ರಹ್ಮಾವರದ ಕ್ರಾಸ್‌ಲ್ಯಾಂಡ್‌ ಪದವಿ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಾಂಶುಪಾಲ ಜಾನ್ಸನ್‌ ಜೇಕಬ್‌ ಯೋಗದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ದೈಹಿಕ ಶಿಕ್ಷಣ ನಿರ್ದೇಶಕ ಬಿಜು ಜೇಕಬ್‌, ಉಪಪ್ರಾಂಶುಪಾಲ ಡಾ. ರಾಬರ್ಟ್‌ ಕ್ಲೈವ್‌ ಇದ್ದರು. ಪದವಿ ಪೂರ್ವ ಕಾಲೇಜಿನ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಮಂಜುಶ್ರೀ ಯೋಗದ ಬಗ್ಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳಿಗೆ ಯೋಗದ ಪ್ರಾತ್ಯಕ್ಷಿಕೆ ನೀಡಿದರು. ವಿದ್ಯಾರ್ಥಿನಿ ರುಥಾಳು ಎಂ. ಸಹಕರಿಸಿದರು. ಉಪನ್ಯಾಸಕಿ ಜ್ಯೋತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕೋಟ ವಿವೇಕ: ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆ ಹಾಗೂ ಉಡುಪಿಯ ಪತಂಜಲಿ ಯೋಗಸಮಿತಿಯ ಆಸರೆಯಲ್ಲಿ ನಡೆದ ಯೋಗೋತ್ಸವದಲ್ಲಿ ಪತಂಜಲಿ ಯೋಗಸಮಿತಿಯ ರಾಘವೇಂದ್ರ ಭಟ್ ಮಾತನಾಡಿ ಇಂದಿನ ಸಂಕೀರ್ಣ ಸಮಾಜದಲ್ಲಿನ ಒತ್ತಡಗಳ ನಿವಾರಣೆಗೆ ಯೋಗ ಚೇತೋಹಾರಿ. ವಿದ್ಯಾರ್ಥಿ
ದೆಸೆಯಲ್ಲಿಯೇ ಯೋಗಾಭ್ಯಾಸವನ್ನು ಅಳವಡಿಸಿಕೊಂಡರೆ ಆತ್ಮವಿಶ್ವಾಸ, ಆತ್ಮಚೇತನವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ವ್ಯಕ್ತಿತ್ವ ವಿಕಸನಕ್ಕೆ ಯೋಗ ಪೂರಕ. ಏಕಾಗ್ರತೆ, ಮಾನಸಿಕ ಶುದ್ಧಿ, ಭಾವನಾತ್ಮಕ ನಿಯಂತ್ರಣ ಮೊದಲಾದವುಗಳ ನಿರ್ವಹಣೆಗೆ ಯೋಗಕಲಿಕೆ ಅಗತ್ಯ ಎಂದು ನುಡಿದರು. ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜಗದೀಶ ನಾವುಡ, ಪತಂಜಲಿ ಯೋಗಸಮಿತಿಯ ರವೀಂದ್ರ ನಾಯಕ್, ವಿದ್ಯಾರ್ಥಿನಿಯರಾದ ನುಸೈಬಾ ಮತ್ತು ನವಮಿ, ಶಾಲಾ ಮುಖ್ಯೋಪಾಧ್ಯಾಯ ಜಗದೀಶ ಹೊಳ್ಳ, ತ್ರಿಶಾ, ಅನನ್ಯಾ ಇದ್ದರು.

ಹಾರಾಡಿ ಜಿ.ಎಂ ಸ್ಕೂಲ್‌: ಬ್ರಹ್ಮಾವರದ ಜಿ.ಎಂ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಮಾನವೀಯತೆಗಾಗಿ ಯೋಗ ಎಂಬ ಘೋಷದೊಂದಿಗೆ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬ್ರಹ್ಮಾವರ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್‌ನ ರಾಘವೇಂದ್ರ ಪೈ ಯೋಗದ ಬಗ್ಗೆ ಮಾಹಿತಿ ನೀಡಿದರು. ಶಾಲಾ ಯೋಗ ಶಿಕ್ಷಕಿ ಸುಬ್ಬಲಕ್ಷ್ಮೀ ಯೋಗದ ಮಹತ್ವ, ಅನುಕೂಲಗಳ ಕುರಿತು ಮಾಹಿತಿ ನೀಡಿದರು. ಶಾಲಾ ಪ್ರಾಂಶುಪಾಲ ಬ್ರಹ್ಮಾಚಾರಿ ಕೆ ಎನ್, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಶಾಲಾ ಶೈಕ್ಷಣಿಕ ನಿರ್ದೇಶಕ ಪ್ರಣವ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.