ADVERTISEMENT

ಜೀವ ಜೀವನ ಅಮೂಲ್ಯ; ಸಂಚಾರ ನಿಯಮ ಪಾಲಿಸಿ

ನಗರದಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಬೈಕ್‌ ಜಾಥಾ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 15:23 IST
Last Updated 3 ಫೆಬ್ರುವರಿ 2021, 15:23 IST
ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಬುಧವಾರ ಜೋಡುಕಟ್ಟೆ ಬಳಿ ಜಾಗೃತಿ ಜಾಥಾಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ ಚಾಲನೆ ನೀಡಿದರು.
ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಬುಧವಾರ ಜೋಡುಕಟ್ಟೆ ಬಳಿ ಜಾಗೃತಿ ಜಾಥಾಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ ಚಾಲನೆ ನೀಡಿದರು.   

ಉಡುಪಿ: ಜೀವ ಮತ್ತು ಜೀವನ ಅಮೂಲ್ಯವಾಗಿದ್ದು, ದ್ವಿಚಕ್ರ ವಾಹನ ಸವಾರರು ವಾಹನ ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ ಸಲಹೆ ನೀಡಿದರು.

ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಬುಧವಾರ ಜಿಲ್ಲಾ ಪೊಲೀಸ್, ರೋಟರಿ ಉಡುಪಿ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿದ್ದ ಹೆಲ್ಮೆಟ್ ಕಡ್ಡಾಯ ಬಳಕೆ ಕುರಿತು ಜಾಗೃತಿ, ಬೈಕ್ ಜಾಥಾ ಮತ್ತು ಒಂದೇ ದೇಶ ಒಂದೇ ಕರೆ ಸಂಖ್ಯೆ 112 ವಾಹನಗಳ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶದಲ್ಲಿ ನಡೆಯುವ ಅಫಘಾತಗಳ ಪ್ರಮಾಣವನ್ನು ವಿಶ್ಲೇಷಿಸಿದರೆ ದ್ವಿಚಕ್ರ ವಾಹನಗಳ ಅಫಘಾತಗಳೇ ಹೆಚ್ಚಾಗಿರುವುದು ಕಂಡುಬರುತ್ತದೆ. ಜತೆಗೆ, ಬೈಕ್ ಸವಾರರು ಹೆಲ್ಮೆಟ್ ಧರಿಸದ ಕಾರಣ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಅಫಘಾತಗಳು ಸಂಭವಿಸಿದಾಗ ತಲೆಗೆ ಪೆಟ್ಟುಬಿದ್ದು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುವುದರಿಂದ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಅಪಘಾತ ಸಂಭವಿಸಿದಾಗ ತುರ್ತು ಸಹಾಯಕ್ಕೆ ಹಾಗೂ ಕಾನೂನು ನೆರವಿಗೆ ಸ್ಥಳದಲ್ಲಿ ಪೊಲೀಸರು ಲಭ್ಯವಿರುವುದಿಲ್ಲ. ಈ ಕಾರಣದಿಂದ ಒಂದೇ ದೇಶ ಒಂದೇ ಕರೆ ಘೋಷಣೆಯೊಂದಿಗೆ 112 ಸೇವೆಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ 112ಗೆ ಕರೆ ಮಾಡಿದರೆ ಕೆಲವೇ ಕ್ಷಣಗಳಲ್ಲಿ ಸಿಬ್ಬಂದಿ ನೆರವಿಗೆ ಧಾವಿಸಲಿದ್ದಾರೆ. ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದರು.

ನಗರದ ಜೋಡುಕಟ್ಟೆಯಿಂದ ಆರಂಭವಾದ ಬೈಕ್‌ ಜಾಥಾ ಉಡುಪಿ ಬಸ್ ನಿಲ್ದಾಣ, ಕಲ್ಸಂಕ, ಇಂದ್ರಾಳಿ ಜಂಕ್ಷನ್, ಮೂಲಕ ಸಂತೆಕಟ್ಟೆಯಲ್ಲಿ ಸಮಾಪನಗೊಂಡಿತು. ಜಾಥಾದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಭಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ಉಡುಪಿ ಸಂಚಾರ ಠಾಣೆ ಪಿಎಸ್‌ಐ ಅಬ್ದುಲ್ ಖಾದರ್, ನಗರಠಾಣೆ ಪಿಎಸ್‌ಐ ಶಕ್ತಿವೇಲು, ರೋಟರಿ ಉಡುಪಿ ಅಧ್ಯಕ್ಷ್ಯೆ ರಾಧಿಕಾ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ದೀಪಾ ಭಂಡಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.