ADVERTISEMENT

ಬಿಲ್ಲವ ಮುಸ್ಲಿಂ ಸ್ನೇಹ ಸಮಾವೇಶಕ್ಕೆ ಪರ ವಿರೋಧ

ಸಮಾವೇಶ ವಿರೋಧಿಸಿ 9ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 15:52 IST
Last Updated 6 ಜನವರಿ 2020, 15:52 IST

ಉಡುಪಿ: ಜಿಲ್ಲಾ ಮುಸ್ಲಿಂ ಒಕ್ಕೂಟ ಹಾಗೂ ಸಮಾನ ಮನಸ್ಕ ಬಿಲ್ಲವ ಸಂಘಟನೆಗಳು ಜ.11ರಂದು ನಗರದ ಪುರಭವನದಲ್ಲಿ ಆಯೋಜಿಸಿರುವ ಬಿಲ್ಲವ ಮುಸ್ಲಿಂ ಸ್ನೇಹ ಸಮಾವೇಶ ರಾಜಕೀಯ ಬಣ್ಣ ಪಡೆದುಕೊಂಡಿದೆ. ಕೆಲವು ಬಿಲ್ಲವ ಮುಖಂಡರು ಸಮಾವೇಶದ ಪರವಾಗಿ ನಿಂತರೆ, ಕೆಲವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಚಾರವಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಎಚ್‌ಪಿ ಹಾಗೂ ಬಿಲ್ಲವ ಸಮಾಜದ ಮುಖಂಡ ಅಚ್ಯುತ ಅಮೀನ್‌ ಕಲ್ಮಾಡಿ, ‘ಹಿಂದೂಗಳನ್ನು ಜಾತಿಯ ಹೆಸರಿನಲ್ಲಿ ಒಡೆಯಲು ಬಿಲ್ಲವ ಮುಸ್ಲಿಂ ಸ್ನೇಹ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶವನ್ನು ರದ್ದುಗೊಳಿಸಬೇಕು. ಇಲ್ಲವಾದರೆ ‘ಬಿಲ್ಲವ’ ಎಂಬ ಪದವನ್ನು ಸಮಾವೇಶದಿಂದ ತೆಗೆದುಹಾಕಬೇಕು' ಎಂದು ಒತ್ತಾಯಿಸಿದರು.

‘ಬಿಲ್ಲವರ ಸಂಸ್ಕೃತಿ, ಆಚಾರ, ವಿಚಾರಗಳು, ಮುಸ್ಲಿಮರ ಸಂಸ್ಕೃತಿ, ಆಚಾರ ವಿಚಾರಗಳು ಬೇರೆ. ಹೀಗಿರುವಾಗ ಸಮಾವೇಶ ಆಯೋಜನೆ ಸರಿಯಲ್ಲ ಎಂಬ ಟೀಕೆಗಳು ಕೇಳಿಬಂದಿವೆ. ಸಮಾಜದ ವಿರೋಧದ ನಡುವೆಯೂ ಸಮಾವೇಶ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಇದೇ 9ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.

ADVERTISEMENT

ಸಮಿತಿಯಲ್ಲಿ ನಿರ್ಧಾರ

ವಿವಾದ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ, ಸಮಾವೇಶದ ಪ್ರಧಾನ ಸಂಚಾಲಕ ಜನಾರ್ದನ ತೋನ್ಸೆ, ‘ಬಿಲ್ಲವ ಮುಸ್ಲಿಂ ಸಮಾವೇಶಕ್ಕೆ ಪರ, ವಿರೋಧಗಳು ವ್ಯಕ್ತವಾಗಿದ್ದು, ಸ್ವಾಗತ ಸಮಿತಿಯ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.

ಮುಸ್ಲಿಂ ಹಾಗೂ ಬಿಲ್ಲವ ಸಮುದಾಯಗಳ ನಡುವಿನ ಬೆಸುಗೆಯನ್ನು ಬಲಪಡಿಸಿ, ಪರಸ್ಪರ ಸಹಕಾರದ ಮೂಲಕ ಅಭಿವೃದ್ಧಿಯ ದಿಸೆಯಲ್ಲಿ ಸಾಗುವ ಅವಕಾಶಗಳ ಚಿಂತನೆಗಾಗಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಯೋಜಕರು ತಿಳಿಸಿದ್ದಾರೆ.

ಸಮಾವೇಶದ ಅಧ್ಯಕ್ಷತೆಯನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ವಹಿಸಿದ್ದು, ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್‌ಮಟ್ಟು ಹಾಗೂ ಅಬ್ದುಸ್ಸಲಾಮ್‌ ಪುತ್ತಿಗೆ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮಾವೇಶ ಉದ್ಘಾಟಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.