ADVERTISEMENT

ಉಸ್ತುವಾರಿಯಾಗಿ ಕೋಟಾ ನೇಮಕಕ್ಕೆ ಅಡ್ಡಿ: ಆರೋಪ

ನಾರಾಯಣ ಗುರು ಜಯಂತಿಗೆ ಗೈರು: ಬಿಲ್ಲವ ಪರಿಷತ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 14:26 IST
Last Updated 16 ಸೆಪ್ಟೆಂಬರ್ 2019, 14:26 IST
ಬಿಲ್ಲವ ಪರಿಷತ್ ಮುಖಂಡರು ಸೋಮವಾರ ಸುದ್ದಿಗೋಷ್ಠಿ ನಡೆಸಿದರು
ಬಿಲ್ಲವ ಪರಿಷತ್ ಮುಖಂಡರು ಸೋಮವಾರ ಸುದ್ದಿಗೋಷ್ಠಿ ನಡೆಸಿದರು   

ಉಡುಪಿ: ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡುವುದು ಬೇಡ ಎಂದು ಜಿಲ್ಲೆಯ ಕೆಲವು ಶಾಸಕರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿರುವುದು ಖಂಡನೀಯ. ಕರಾವಳಿಯ ಬಹುಸಂಖ್ಯಾತ ಬಿಲ್ಲವ ಸಮುದಾಯದಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಇದು ಶೋಭೆ ತರುವುದಿಲ್ಲ ಎಂದು ಬಿಲ್ಲವರ ಪರಿಷತ್ತು ಜಿಲ್ಲಾಧ್ಯಕ್ಷ ನವೀನ್ ಅಮೀನ್ ಶಂಕರಪುರ ಬೇಸರ ವ್ಯಕ್ತಪಡಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೌಹರ್ದ ಹಾಗೂ ಸಹಬಾಳ್ವೆ ಬಯಸುವ ಬಿಲ್ಲವ ಸಮಾಜಕ್ಕೆ ಅವಮಾನವಾಗುವಂತೆ ಕೆಲವು ಜನಪ್ರತಿನಿಧಿಗಳು ನಡೆದುಕೊಳ್ಳುತ್ತಿದ್ದಾರೆ. ಇಂತಹ ಧೋರಣೆ ಮುಂದುವರಿದರೆ ಚುನಾವಣೆಯಲ್ಲಿ ಮತ ಬಹಿಷ್ಕಾರ ಮಾಡಬೇಕಾಗುತ್ತದೆ. ಬಿಲ್ಲವ ಸಮಾಜದ ಹಿತಾಸಕ್ತಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು’ ಎಂದು ಎಚ್ಚರಿಸಿದರು.

ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಈಚೆಗೆ ನಡೆದ ಜಿಲ್ಲಾಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರು, ಸಂಸದರು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷಕರು ಭಾಗವಹಿಸದಿರುವುದು ಬಿಲ್ಲವ ಸಮಾಜಕ್ಕೆ ಬಹಳ ನೋವುಂಟಾಗಿದೆ ಎಂದು ಬಿಲ್ಲವರ ಪರಿಷತ್ತು ಜಿಲ್ಲಾಧ್ಯಕ್ಷ ನವೀನ್ ಅಮೀನ್ ಶಂಕರಪುರ ಬೇಸರ ವ್ಯಕ್ತಪಡಿಸಿದರು.

ADVERTISEMENT

ಬಿಲ್ಲವ ಸಮುದಾಯವನ್ನು ಜನಪ್ರತಿನಿಧಿಗಳು ಕೇವಲ ಮತ ಬ್ಯಾಂಕ್‌ ಆಗಿ ನೋಡುತ್ತಿದ್ದಾರೆ. ಚುನಾವಣೆ ಸಂದರ್ಭ ಮತಕ್ಕಾಗಿ ಸಮುದಾಯದ ಓಲೈಕೆ ಮಾಡುತ್ತಾರೆ. ಸರ್ಕಾರದ ಮಹನೀಯರ ಜಯಂತಿ ಆಚರಣೆಗೆ ಆಸಕ್ತಿ ತೋರುವ ಜನಪ್ರತಿನಿಧಿಗಳು ನಾರಾಯಣ ಗುರು ಜಯಂತಿಯನ್ನು ನಿರ್ಲಕ್ಷ್ಯ ಮಾಡಿರುವುದು ಖಂಡನೀಯ ಎಂದರು.‌

ಬಿಲ್ಲವರ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಕಟಪಾಡಿ, ಕೋಶಾಧಿಕಾರಿ ಚಂದ್ರಹಾಸ, ಉಪಾಧ್ಯಕ್ಷ ಬದ್ರಿನಾಥ, ಸಂಘಟನಾ ಅಧ್ಯಕ್ಷ ರಮೇಶ್ ಅಂಚನ್, ವಿನೋದ್ ಅಮೀನ್, ಮಹೇಶ್ ಪೂಜಾರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.