ADVERTISEMENT

ಪೇಜಾವರ ಶ್ರೀಗಳ ಅವಹೇಳನ ಸಹಿಸುವುದಿಲ್ಲ: ಪೆರ್ಣಂಕಿಲ‌ ಶ್ರೀಶ ನಾಯಕ್‌

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2024, 14:25 IST
Last Updated 14 ಡಿಸೆಂಬರ್ 2024, 14:25 IST
ಪೆರ್ಣಂಕಿಲ ಶ್ರೀಶ ನಾಯಕ್
ಪೆರ್ಣಂಕಿಲ ಶ್ರೀಶ ನಾಯಕ್   

ಹಿರಿಯಡ್ಕ: ವಿಶ್ವದಾದ್ಯಂತ ಕೋಟ್ಯಾಂತರ ಭಕ್ತಾಭಿಮಾನಿಗಳನ್ನು ಹೊಂದಿರುವ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ, ಕೆಳಮಟ್ಟದಲ್ಲಿ ಅವಹೇಳನ ಮಾಡುವ ಘಟನೆಗಳು ನಡೆಯುತ್ತಿರುವುದು ಖಂಡನೀಯ. ಅವಹೇಳನ ಮಾಡಿದವರ ಮೇಲೆ ಪೊಲೀಸರು ಸುಮುಟೊ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ‌ ಶ್ರೀಶ ನಾಯಕ್‌ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಉಡುಪಿಯ ಅಷ್ಟ ಮಠಗಳ ಯತಿಗಳ ಪರಂಪರೆಯಲ್ಲಿ ಯಾರೂ ಸಂವಿಧಾನದ ವಿರುದ್ಧ ಮಾತನಾಡಿಲ್ಲ. ವಿಶ್ವಪ್ರಸನ್ನತೀರ್ಥರೂ ಸಂವಿಧಾನಕ್ಕೆ ಅನುಗುಣವಾಗಿ, ಅದರ ಆಶಯದಂತೆ ಸಮಾಜೋದ್ಧಾರಕ್ಕಾಗಿ ಶ್ರಮಿಸುತಿದ್ದಾರೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣದಲ್ಲಿ ಅವರ ಶ್ರಮ, ಅಸಂಖ್ಯ ಗೋವುಗಳ ಸೇವೆ, ದಲಿತರಿಗೆ ಭಕ್ತಿ ಮಾರ್ಗದರ್ಶನ, ಅಶಕ್ತರಿಗೆ ಮನೆ ನಿರ್ಮಾಣ, ನಕ್ಸಲ್ ಪೀಡಿತ ಪ್ರದೇಶಗಳ ಜನರಿಗೆ ಸಾಂತ್ವಾನ, ಮಠ– ಮಂದಿರಗಳ ಜೀರ್ಣೋದ್ಧಾರ ಇತ್ಯಾದಿ ಸಾಧನೆಗಳನ್ನು ಸಹಿಸದವರು ವಿಜಯಪುರದಲ್ಲಿ ಶ್ರೀಗಳ ವಿರುದ್ಧ ಕೆಳಮಟ್ಟದಲ್ಲಿ ಮಾತನಾಡಿರುವುದನ್ನ ಭಕ್ತರು ಸಹಿಸುವುದಿಲ್ ಎಂದು ತಿಳಿಸಿದ್ದಾರೆ.

ವ್ಯಕ್ತಿಯ ಘನತೆಯನ್ನೇ ಅವಹೇಳನ ಮಾಡುವ ಇಂತಹ ಪದಗಳ ಬಳಕೆಯನ್ನು ಬಿ.ಆರ್.ಅಂಬೇಡ್ಕರ್ ಇದ್ದಿದ್ದರೆ ಉಗ್ರವಾಗಿ ವಿರೋಧಿಸುತಿದ್ದರು. ಅವರ ಅನುಯಾಯಿಗಳು ಎಂದು ಹೇಳಿಕೊಳ್ಳುವವರು ಆಡಿರುವ ಈ ಅಸಂವಿಧಾನಿಕ ಪದಗಳು ಅಂಬೇಡ್ಕರ್ ಅವರಿಗೆ ಮಾಡಿರುವ ಘೋರ ಅವಮಾನ. ಪೇಜಾವರ ಶ್ರೀಗಳು ತಾವು ಸಂವಿಧಾನದ ವಿರುದ್ಧ ಮಾತನಾಡಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ADVERTISEMENT

ಆದರೂ ತುಚ್ಛವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿರುವುದನ್ನು ಹಿಂದೂ ಸಮಾಜ ಸಹಿಸುವುದಿಲ್ಲ. ಇನ್ನು ಮುಂದೆ ಶ್ರೀಗಳ ವಿರುದ್ಧ ಅಥವಾ ಹಿಂದೂ ಧರ್ಮದ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುವುದು, ಅವಹೇಳನ ಮಾಡಿದರೆ ಅಭಿಮಾನಿಗಳು ಸುಮ್ಮನಿರುವುದಿಲ್ಲ. ಹಿಂದೂ ನಾಯಕ ಮೇಲೆ ಇಲ್ಲಸಲ್ಲದ ಕಾರಣಗಳಿಗೆ ಸುಮೊಟೊ ಕೇಸ್‌ ಹಾಕುವ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ, ಎಸ್‌ಪಿ ಅವರು ಪೇಜಾವರ ಶ್ರೀಗಳ ವಿರುದ್ಧ ಮಾತನಾಡುವವರ ಮೇಲೆಯೂ ಕೇಸ್‌ ದಾಖಲಿಸಿ ಸಂವಿಧಾನ ಬದ್ಧತೆ ಪ್ರದರ್ಶಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.