ADVERTISEMENT

'ಆತ್ಮ ನಿರ್ಭರದಿಂದ ಅಮೃತ ಕಾಲದತ್ತ ಭಾರತ'

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 15:21 IST
Last Updated 7 ಫೆಬ್ರುವರಿ 2023, 15:21 IST

ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಕೇಂದ್ರ ಬಜೆಟ್-2023 'ನೀರಸ ಜಗತ್ತಿಗೆ ಭಾರತ ಒಂದೇ ಭರವಸೆ'ಯಂತೆ ಉತ್ತರದಾಯಿಯಾಗಿ ಮೂಡಿಬಂದಿದೆ ಎಂದು ಬಿಜೆಪಿ ಜಿಲ್ಲಾ ಆರ್ಥಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ದಿವಾಕರ ಶೆಟ್ಟಿ ಹೇಳಿದರು.

ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಕೇಂದ್ರ ಬಜೆಟ್ ಕುರಿತು ಮಾತನಾಡಿ, ಭವಿಷ್ಯದಲ್ಲಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಉದಾತ್ತ ಚಿಂತನೆಗಳನ್ನು ಒಳಗೊಂಡಿರುವ ಸಪ್ತ ಸೂತ್ರಗಳ ಆರ್ಥಿಕ ಶಿಸ್ತಿನ ಬಜೆಟ್‌ ಮಂಡಿಸಲಾಗಿದೆ.

45.3 ಲಕ್ಷ ಕೋಟಿ ಗಾತ್ರದ ಬಜೆಟ್‌ ಕಳೆದ ಸಾಲಿಗಿಂತ ಶೇ 14ರಷ್ಟು ದೊಡ್ಡದಾಗಿದ್ದು ದೇಶದ ಅಮೃತ ಕಾಲದ ಮೊದಲ ಬಜೆಟ್ ಖ್ಯಾತಿ ಪಡೆದಿದೆ. ದೇಶದಲ್ಲಿ ಡಿಜಿಟಲ್ ಕ್ರಾಂತಿ ನಡೆದಿದ್ದು, ₹ 7,400 ಕೋಟಿ ಡಿಜಿಟಲ್ ವ್ಯವಹಾರ ನಡೆದಿದೆ. 11.74 ಕೋಟಿ ಶೌಚಾಲಯ ನಿರ್ಮಿಸಲಾಗಿದೆ.

ADVERTISEMENT

ಉಜ್ವಲ ಯೋಜನೆಯಡಿ 9.4 ಕೋಟಿ ಮಂದಿಗೆ ಉಚಿತ ಗ್ಯಾಸ್ ಸಂಪರ್ಕ ಕೊಡಲಾಗಿದೆ. 220 ಕೋಟಿ ಮಂದಿಗೆ ಉಚಿತ ಕೋವಿಡ್ ಲಸಿಕೆ ನೀಡಲಾಗಿದೆ. 47.8 ಕೋಟಿ ಜನ್‌ಧನ್ ಬ್ಯಾಂಕ್ ಖಾತೆ ತೆರೆಯಲಾಗಿದೆ. ₹ 44.64 ಕೋಟಿ ಆಯುಷ್ಮಾನ್ ಆರೋಗ್ಯ ವಿಮೆ ಪಾವತಿಸಲಾಗಿದೆ. ಕೃಷಿ ಸಮ್ಮಾನ್ ಯೋಜನೆಯಡಿ 11.4 ಕೋಟಿ ರೈತರಿಗೆ ₹ 2.20 ಲಕ್ಷ ಕೋಟಿ ನೇರವಾಗಿ ಖಾತೆಗೆ ಹಾಕಲಾಗಿದೆ ಎಂದರು.

ಆರ್ಥಿಕ ಬಲಾಢ್ಯ ನಾರಿ ಶಕ್ತಿ, ಸಾಂಪ್ರದಾಯಕ ಕುಶಲ ಕರ್ಮಿಗಳ ಕೌಶಲ ಅಭಿವೃದ್ಧಿಗೆ ನೆರವು, ಪ್ರವಾಸ್ಕೋದ್ಯಮ ಕ್ಷೇತ್ರದ ಅಭಿವೃದ್ಧಿ, ಕೃಷಿಗೆ ಉತ್ತೇಜನ, ಶ್ರೀ ಅನ್ನ ಯೋಜನೆ, ವಿಶ್ವಕರ್ಮ ಕೌಶಲ ಸಮ್ಮಾನ್ ಯೋಜನೆ, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಧ್ಯಮ ವರ್ಗಕ್ಕೆ ಸರ್ವ ಸಹಕಾರ, ಕೌಶಲಾಭಿವೃದ್ಧಿ ಮೂಲಕ ಯುವ ಶಕ್ತಿಗೆ ಉತ್ತೇಜನ, ಹಸಿರು ಹೊದಿಕೆ, ಮೂಲಸೌಕರ್ಯ ವೃದ್ಧಿಗೆ ಒತ್ತು, ಡಿಜಿಟಲ್ ಕ್ರಾಂತಿಗೆ ಬಜೆಟ್‌ನಲ್ಲಿ ಒತ್ತುನೀಡಲಾಗಿದೆ. ಆದಾಯ ತೆರಿಗೆಯ ಹೊಸ ನಿಯಮದಲ್ಲಿ ₹ 7 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶ್ರೀನಿಧಿ ಶೆಟ್ಟಿ, ಶಿವಕುಮಾರ್ ಅಂಬಲಪಾಡಿ, ಕಚೇರಿ ಉಸ್ತುವಾರಿ ಸತ್ಯಾನಂದ ನಾಯಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.