ADVERTISEMENT

ಸಂಘಟನೆ, ಹೋರಾಟದಿಂದ ಹಿಂದುಳಿದ ವರ್ಗಕ್ಕೆ ಶಕ್ತಿ

ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ವಿಶೇಷ ಕಾರ್ಯಕಾರಿಣಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 14:40 IST
Last Updated 31 ಅಕ್ಟೋಬರ್ 2020, 14:40 IST
ಜಿಲ್ಲಾ ಕಚೇರಿಯಲ್ಲಿ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ವಿಶೇಷ ಕಾರ್ಯಕಾರಿಣಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು.
ಜಿಲ್ಲಾ ಕಚೇರಿಯಲ್ಲಿ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ವಿಶೇಷ ಕಾರ್ಯಕಾರಿಣಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು.   

ಉಡುಪಿ: ಪಕ್ಷ ಸಂಘಟನೆ, ಕ್ರಿಯಾಶೀಲತೆ, ಹೋರಾಟದ ಮೂಲಕ ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬುವ ಅವಕಾಶಗಳನ್ನು ಹಿಂದುಳಿದ ವರ್ಗಗಳ ಮೋರ್ಚಾ ಪಡೆಯಲು ಸಾಧ್ಯವಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲಾ ಕಚೇರಿಯಲ್ಲಿ ಶನಿವಾರ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ವಿಶೇಷ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿ, ‘ಬಿಜೆಪಿ ಸರ್ವಸ್ಪರ್ಶಿ ಸರ್ವವ್ಯಾಪಿಯಾಗಿದ್ದು, ಗ್ರಾಮ ಪಂಚಾಯಿತಿಯಿಂದ ಹಿಡಿದು ಎಲ್ಲ ಸ್ತರಗಳಲ್ಲಿಯೂ ಅಧಿಕಾರದಲ್ಲಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಇಲಾಖೆಯಿಂದ ಸಿಗುವ ಸವಲತ್ತುಗಳನ್ನು ಅರ್ಹರಿಗೆ ತಲುಪಿಸಲು ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಮರ್ಥರನ್ನು ಸಮಾಜದ ಮುನ್ನೆಲೆಗೆ ತರುವ ಮೂಲಕ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಪಡೆಯಬೇಕು. ಕಠಿಣ ಪರಿಶ್ರಮ, ಶೃದ್ಧೆ ಮತ್ತು ಕ್ರಿಯಾಶೀಲತೆಯಿಂದ ಕೆಲಸ ಮಾಡುವ ಮೂಲಕ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಸಂಘಟನಾತ್ಮಕವಾಗಿ ಬಲಿಷ್ಠವಾಗಬೇಕು ಎಂದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ‘ಬದ್ಧತೆ, ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡರೆ ಅವಕಾಶಗಳು ಒಲಿಯುತ್ತವೆ. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಅಹರ್ನಿಶಿ ಶ್ರಮಿಸುವ ಮೂಲಕ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಸಂಘಟಿತರಾಗಿ ತೊಡಗಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸುರೇಂದ್ರ ಪಣಿಯೂರು ಮಾತನಾಡಿ, ‘ಜನಪರ ಕಾರ್ಯಕ್ರಮಗಳು ಹಾಗೂ ಪರಿಣಾಮಕಾರಿಯಗಿ ಪಕ್ಷ ಸಂಘಟನೆ ಮೂಲಕ ಹಿಂದುಳಿದ ವರ್ಗಗಳ ಮೋರ್ಚಾವನ್ನು ಮಾದರಿ ಮೋರ್ಚಾವನ್ನಾಗಿಸಲು ಶ್ರಮಿಸುವುದಾಗಿ’ ತಿಳಿಸಿದರು.

ಬಿಜೆಇ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷ ಅಶೋಕ್ ಮೂರ್ತಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ವಿವೇಕಾನಂದ ಡಬ್ಬಿ, ರಾಜ್ಯ ಕಾರ್ಯದರ್ಶಿ ವಿಠಲ ಪೂಜಾರಿ ಮಾತನಾಡಿದರು. ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಪ್ರಭಾರಿ ರೇಶ್ಮಾ ಉದಯಶೆಟ್ಟಿ, ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಕುಲಾಲ್, ಅರುಣ್ ಬಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.