ADVERTISEMENT

ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರನಿರ್ಮಾಣ

ಬಿಜೆಪಿ ಅಭ್ಯಾಸ ವರ್ಗದ ಮುಖ್ಯ ಉದ್ದೇಶ: ನಳಿನ್ ಕುಮಾರ್ ಕಟೀಲ್‌

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 13:01 IST
Last Updated 12 ನವೆಂಬರ್ 2020, 13:01 IST
ನಗರದ ಶಾರದಾ ಇಂಟರ್‌ನ್ಯಾಷನಲ್‌ ಹೋಟೆಲ್‌ ಸಭಾಂಗಣದಲ್ಲಿ ಗುರುವಾರ ಮಂಗಳೂರು ವಿಭಾಗ ವಿಷಯ ಪ್ರಮುಖರ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದರು.
ನಗರದ ಶಾರದಾ ಇಂಟರ್‌ನ್ಯಾಷನಲ್‌ ಹೋಟೆಲ್‌ ಸಭಾಂಗಣದಲ್ಲಿ ಗುರುವಾರ ಮಂಗಳೂರು ವಿಭಾಗ ವಿಷಯ ಪ್ರಮುಖರ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದರು.   

ಉಡುಪಿ: ಕಾರ್ಯಕರ್ತರನ್ನು ನಾಯಕರನ್ನಾಗಿ ರೂಪಿಸುವುದು, ಪಕ್ಷದ ವಿಚಾರ–ಧಾರೆಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದು ಹಾಗೂ ಸಿದ್ಧಾಂತಗಳಲ್ಲಿ ನಂಬಿಕೆ ಉಳಿಸುವುದು ಅಭ್ಯಾಸ ವರ್ಗದ ಪ್ರಮುಖ ಉದ್ದೇಶ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ನಗರದ ಶಾರದಾ ಇಂಟರ್‌ನ್ಯಾಷನಲ್‌ ಹೋಟೆಲ್‌ ಸಭಾಂಗಣದಲ್ಲಿ ಗುರುವಾರ ಮಂಗಳೂರು ವಿಭಾಗ ವಿಷಯ ಪ್ರಮುಖರ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿದ ಅವರು, ‘ಬಿಜೆಪಿಯಲ್ಲಿ ಜನಸಂಘ ವಿಲೀನವಾದರೂ ಅದರ ಕಾರ್ಯ ಪದ್ಧತಿ ಹಾಗೂ ವಿಚಾರಧಾರೆಗಳನ್ನು ಪಕ್ಷ ಮರೆಯಲಿಲ್ಲ. ಅಭ್ಯಾಸ ವರ್ಗಗಳನ್ನು ಕೈಬಿಡಲಿಲ್ಲ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡುವುದು ಬಿಜೆಪಿಯ ಗುರಿಯಾಗಿದ್ದು, ಕಾರ್ಯಕರ್ತರಲ್ಲಿ ಸಂಸ್ಕಾರ ನೀಡಲು ಅಭ್ಯಾಸ ವರ್ಗಗಳನ್ನು ಆಯೋಜಿಸುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅಭ್ಯಾಸವರ್ಗದಲ್ಲಿ ಚರ್ಚೆಯಾಗುವ ಪ್ರಮುಖ 10 ವಿಚಾರಗಳನ್ನು ವಿಷಯ ಪ್ರಮುಖರು ಅಧ್ಯಯನ ಮಾಡಬೇಕು. ಬಳಿಕ ಕಾರ್ಯಕರ್ತರಿಗೆ ಮನದಟ್ಟು ಮಾಡಿಸಿ ಪಕ್ಷವನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸಬೇಕು. ಕಾರ್ಯಕರ್ತರನ್ನು ನಾಯಕರನ್ನಾಗಿ ತಯಾರು ಮಾಡಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಪಕ್ಷದಲ್ಲಿ ವ್ಯಕ್ತಿ ಪೂಜೆ ಇಲ್ಲ; ತತ್ವ ಪೂಜೆ ಮಾತ್ರ ಇದೆ. ಬಿಜೆಪಿಯಲ್ಲಿ ಮಾತ್ರ ಸಾಮಾನ್ಯ ವ್ಯಕ್ತಿಯೂ ಅತ್ಯುನ್ನತ ಹುದ್ದೆಗೇರಲು ಸಾಧ್ಯವಿದೆ. ಮುಂಬರುವ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಸಂಘಟಿತರಾಗಿ ಶ್ರಮಿಸಿ ಎಂದು ಕರೆ ನೀಡಿದರು.

ಕಾಂಗ್ರೆಸ್ ಅಧಿಕಾರದ ದಿಕ್ಕು ಹಾಗೂ ರಾಜಕಾರಣದ ದಾರಿಯನ್ನು ಬದಲಿಸಿದ ಕಾರಣಕ್ಕೆ ಕೇಂದ್ರ ಸಚಿವ ಸ್ಥಾನ ತ್ಯಜಿಸಿದ ಶ್ಯಾಂಪ್ರಸಾದ್ ಮುಖರ್ಜಿ ಜನಸಂಘ ಹುಟ್ಟುಹಾಕಿದರು. ಜನಸಂಘ ಸ್ಥಾಪನೆಯ ಹಿಂದೆ ಅಧಿಕಾರದ ಉದ್ದೇಶವಿರಲಿಲ್ಲ; ಜಗತ್ತೊಂದೇ ಭಾರತ ನಿರ್ಮಾಣದ ಗುರಿಯಾಗಿತ್ತು. ಬಿಜೆಪಿ ಸ್ಥಾಪನೆಯ ಹಿಂದೆಯೂ ಅಧಿಕಾರದ ಉದ್ದೇಶ ಇರಲಿಲ್ಲ. ಗುರಿ ಸಾಧನೆಗಾಗಿ ರಾಜಕಾರಣದ ದಾರಿ ಆಯ್ಕೆ ಮಾಡಿಕೊಳ್ಳಬೇಕಾಯಿತು ಎಂದರು.

ಸ್ವಾತಂತ್ರ್ಯ ಸಂಗ್ರಾಮದ ಹೆಸರಿನಲ್ಲಿ ದೇಶದ ಅಧಿಕಾರ ಚುಕ್ಕಾಣಿ ಹಿಡಿದ ಕಾಂಗ್ರೆಸ್‌ ಮೂಲ ಆಶಯವನ್ನು ಮರೆತು ವ್ಯಕ್ತಿ ಪೂಜೆ, ಕುಟುಂಬ ರಾಜಕಾರಣ ಹುಟ್ಟು ಹಾಕಿತು. ಜಾತ್ಯತೀತತೆ ಹೆಸರಿನಲ್ಲಿ ಬಹುಸಂಖ್ಯಾತರ, ಅಲ್ಪಸಂಖ್ಯಾತರ ವರ್ಗೀಕರಣ ಮಾಡಿತು. ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ, ದಾರಿ ತಪ್ಪಿದ್ದರಿಂದ ಮತದಾರರು ಬಿಜೆಪಿಗೆ ಅಧಿಕಾರ ನೀಡಿದ್ದಾರೆ. ಮತದಾರರು ಪಕ್ಷದ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಕೊಂಡು ಹೋಗಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗ ಪ್ರಭಾರಿ ಉದಯ್‌ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌, ಮುಖಂಡರಾದ ಸುದರ್ಶನ್‌, ಗೋಪಾಲಕೃಷ್ಣ ಹೆರಳೆ ಇದ್ದರು.

‘ನಾಯಕತ್ವ ಬದಲಾವಣೆ ಇಲ್ಲ’

ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಶಿರಾ, ಆರ್‌.ನಗರ ಉಪ ಚುನಾವಣೆ ಹಾಗೂ ಪದವೀಧರ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮುಂದಿನ ಎಲ್ಲ ಪಂಚಾಯಿತಿ ಮಟ್ಟದ ಹಾಗೂ ಲೋಕಸಭೆ, ವಿಧಾನಸಭೆ ಉಪ ಚುನಾವಣೆಗಳಲ್ಲೂ ಪಕ್ಷ ಗೆಲ್ಲುವುದು ನಿಶ್ಚಿತ ಎಂದರು. ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಪಕ್ಷದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.