
ಬೋನಿನಲ್ಲಿ ಸೆರೆ ಹಿಡಿದ ಕಪ್ಪು ಚಿರತೆ ಹಾಗೂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅರಣ್ಯಾಧಿಕಾರಿಗಳು
ಬ್ರಹ್ಮಾವರ: ತಾಲ್ಲೂಕಿನ ಆರೂರು ಗ್ರಾಮದಲ್ಲಿ ಕೋಳಿಯೊಂದನ್ನು ಅಟ್ಟಿಸಿಕೊಂಡು ಹೋಗಿ ಬಾವಿಗೆ ಬಿದ್ದಿದ್ದ ಕಪ್ಪು ಚಿರತೆಯನ್ನು ರಕ್ಷಣೆ ಮಾಡಲಾಗಿದೆ.
ಭಾನುವಾರ ರಾತ್ರಿ ಕೋಳಿಯನ್ನು ಅಟ್ಟಿಸಿಕೊಂಡು ಹೋದ ಚಿರತೆ ಗ್ರಾಮದ ಅಡ್ಜೀಲ್‌ನ ಶಂಕರ ಪೂಜಾರಿ ಅವರ ಆವರಣವಿಲ್ಲದ ಬಾವಿಗೆ ಬಾವಿಗೆ ಬಿದ್ದಿದೆ. ಮನೆಯವರು ಈ ವಿಷಯವನ್ನು ತಕ್ಷಣ ಪಂಚಾಯಿತಿ ಅಧ್ಯಕ್ಷ ಗುರುರಾಜ ರಾವ್ ಅವರಿಗೆ ತಿಳಿಸಿದ್ದು, ಅವರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸೋಮವಾರ ಬೆಳಿಗ್ಗೆ ಬಂದ ಅಧಿಕಾರಿಗಳು, ಬಾವಿಯೊಳಗೆ ಪಂಜರವನ್ನು ಇಳಿಸಿ ಚಿರತೆಯನ್ನು ಮೇಲಕ್ಕೆತ್ತಿ, ಕುದುರೆಮುಖ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.
ಪಶ್ಚಿಮ ಘಟ್ಟದ ಕಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುವ ಕಪ್ಪು ಚಿರತೆ, ಉಡುಪಿ ಜಿಲ್ಲೆಯಲ್ಲಿ ಕಾಣಸಿಗುವುದು ಅಪರೂಪ. ಬಾವಿಗೆ ಬಿದ್ದಿದ್ದ ಗಂಡು ಚಿರತೆ ಸುಮಾರು ಮೂರು ವರ್ಷದ್ದಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕೈದು ತಿಂಗಳುಗಳಿಂದ ಕಪ್ಪು ಚಿರತೆ ಆರೂರು ಗ್ರಾಮದಲ್ಲಿ ಸಂಚರಿಸುತ್ತಿದ್ದು, ಕೆಲವರ ನಾಯಿಗಳನ್ನು ಹೊತ್ತೊಯ್ದಿದಿದೆ. ಇದರಿಂದ ಜನರು ಭಯಭೀತರಾಗಿದ್ದರು. ಚಿರತೆ ಸೆರೆ ಹಿಡಿದ ಮೇಲೆ ನೆಮ್ಮದಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ಅರಣ್ಯಾಧಿಕಾರಿ ವಾಸೀಂ ಶೇಖ್, ಗಾರ್ಡ್‌ಗಳಾದ ರಮೇಶ್, ಶ್ರೀನಿವಾಸ, ರಾಮಚಂದ್ರ ಮತ್ತು ಪ್ರವೀಣ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.