ADVERTISEMENT

ದೋಣಿ ದುರಂತ: ಮೀನುಗಾರರ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 6:27 IST
Last Updated 18 ಜುಲೈ 2025, 6:27 IST
ಸುರೇಶ್ ಖಾರ್ವಿ
ಸುರೇಶ್ ಖಾರ್ವಿ   

ಕುಂದಾಪುರ: ಗಂಗೊಳ್ಳಿ ಅಳಿವೆ ಬಾಗಿಲಿನ ಹೊರ ಭಾಗದಲ್ಲಿ ಮಂಗಳವಾರ ಸಂಭವಿಸಿದ್ದ ನಾಡದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೂವರು ಮೀನುಗಾರರ ಮೃತದೇಹಗಳು ಪತ್ತೆಯಾಗಿವೆ.

ಲೋಹಿತ್ ಖಾರ್ವಿ (34) ಎನ್ನುವವರ ಶವ ಬುಧವಾರ ಬೆಳಿಗ್ಗೆ 4ರ ವೇಳೆಗೆ ಗಂಗೊಳ್ಳಿಯ ಲೈಟ್‌ ಹೌಸ್ ಪ್ರದೇಶದಲ್ಲಿ ದೊರಕಿತ್ತು. ಜಗನ್ನಾಥ್ ಖಾರ್ವಿ (50) ಅವರ ಮೃತದೇಹ ಕುಂದಾಪುರ ಕೋಡಿ ಕಿನಾರೆ ಹಳೆ ಅಳಿವೆ ಬಳಿ ಸಂಜೆ 7.30ಕ್ಕೆ ಪತ್ತೆಯಾಗಿತ್ತು. ಕೋಡಿ ಸೀವಾಕ್ ಬಳಿ ಸುರೇಶ್ ಖಾರ್ವಿ (48) ಅವರ ಮೃತದೇಹ ಗುರುವಾರ ಬೆಳಿಗ್ಗೆ 6ರ ವೇಳೆಗೆ ಪತ್ತೆಯಾಗಿದೆ.

ಮಂಗಳವಾರ (ಜು.15) ಬೆಳಿಗ್ಗೆ ಮೀನುಗಾರಿಕೆಗೆಂದು ಅರಬ್ಬಿ ಕಡಲಿಗೆ ತೆರಳಿದ್ದ ಗಂಗೊಳ್ಳಿಯ ನಾಲ್ವರು ಮೀನುಗಾರರಿದ್ದ ನಾಡದೋಣಿ ಕಡಲಿನ ಅಬ್ಬರಕ್ಕೆ ಮಗುಚಿ ಬಿದ್ದು, ಮೂವರು ಮೀನುಗಾರರು ನೀರು ಪಾಲಾಗಿ, ಒಬ್ಬರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದರು.

ADVERTISEMENT

ನಾಪತ್ತೆಯಾದವರ ಹುಡುಕಾಟಕ್ಕೆ ಮಂಗಳವಾರ ಬೆಳಿಗ್ಗೆಯಿಂದಲೇ ಶೌರ್ಯ ತಂಡದವರು, ಕೋಸ್ಟಲ್ ಗಾರ್ಡ್, ಕರಾವಳಿ ಕಾವಲು ಪಡೆ, ಪೊಲೀಸರು, ಮುಳುಗು ತಜ್ಞರು ನಿರಂತರ ಪ್ರಯತ್ನ ನಡೆಸಿದ್ದರು. ಕೋಸ್ಟಲ್ ಗಾರ್ಡ್‌ನವರು ಆಧುನಿಕ ತಂತ್ರಜ್ಞಾನ ಬಳಸಿ 5 ಕಿ.ಮೀ. ವ್ಯಾಪ್ತಿಯ ದೂರವನ್ನು ತೋರಿಸುವ ಡ್ರೋಣ್ ಕ್ಯಾಮೆರಾ ಬಳಸಿ, ಮೀನುಗಾರರ ಪತ್ತೆಗೂ ಪ್ರಯತ್ನಿಸುತ್ತಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹಾಗೂ ಕರಾವಳಿ ಕಾವಲು ಪಡೆಯ ಎಸ್.ಪಿ ಮಿಥುನ್‌ಕುಮಾರ್ ಅವರು, ಪತ್ತೆ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದರು. ಪತ್ತೆ ಕಾರ್ಯಾಚರಣೆಗೆ ಹೆಲಿಕಾಪ್ಟರ್ ಬಳಕೆ ಮಾಡಿಕೊಳ್ಳುವ ಕುರಿತು ಪ್ರಸ್ತಾಪಗಳು ಬಂದಿದ್ದವು.

ಸಂಸದರಾದ ಬಿ.ವೈ.ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರುರಾಜ್ ಗಂಟಿಹೊಳೆ, ಎ.ಕಿರಣ್‌ಕುಮಾರ ಕೊಡ್ಗಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಮೃತರ ಕುಟುಂಬಿಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿ, ಸರ್ಕಾರದಿಂದ ಗರಿಷ್ಠ ಪರಿಹಾರ ಒದಗಿಸುವ ಕುರಿತು ಭರವಸೆ ನೀಡಿದ್ದಾರೆ.

ಮೀನುಗಾರರು ಸಮುದ್ರಕ್ಕಿಳಿಯದಂತೆ ಮನವಿ: ಕರಾವಳಿಯಲ್ಲಿ ಎಡೆಬಿಡದೆ ಮಳೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ನೋಡಿಕೊಳ್ಳಬೇಕು ಹಾಗೂ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ದೃಷ್ಟಿಯಿಂದ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿರುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.