
ಬ್ರಹ್ಮಾವರ: ಸಮಾಜದ ಮೂರು ಪ್ರಮುಖ ಅಂಗಗಳು ಜನರಲ್ಲಿ ನಂಬಿಕೆ ಕಳೆದುಕೊಂಡಿವೆ. ಸಮಾಜವನ್ನು ತಿದ್ದುವಲ್ಲಿ ಹಾಗೂ ಪರಿವರ್ತನೆ ಮಾಡುವಲ್ಲಿ ಪತ್ರಿಕಾ ರಂಗದ ಬಗ್ಗೆ ಹೆಚ್ಚು ನಂಬಿಕೆ ಇದೆ. ಮಾಧ್ಯಮಗಳು ಈ ನಂಬಿಕೆಯನ್ನು ಉಳಿಸಿಕೊಳ್ಳುವ ಕಾರ್ಯ ಮಾಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ಬ್ರಹ್ಮಾವರ ಪತ್ರಕರ್ತರ ಸಂಘ ಆಶ್ರಯದಲ್ಲಿ ಜ.4ರಂದು ನಡೆಯಲಿರುವ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಗುರುವಾರ ಬ್ರಹ್ಮಾವರದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕಾರಂಗದಲ್ಲಿ ತಮ್ಮದೇ ಆದ ಮೌಲ್ಯವನ್ನು ಉಳಿಸಿಕೊಂಡವರು ಹಾಗೂ ಜೀವನದ ಕೊನೆತನಕ ಆ ಮೌಲ್ಯಗಳಿಗಾಗಿ ಹೋರಾಡಿದವರು. ಪತ್ರಕರ್ತರು ಎಷ್ಟೇ ಕಷ್ಟವಾದರು ಮೌಲ್ಯಗಳನ್ನು ಉಳಿಸಿಕೊಳ್ಳಬೇಕು. ವಡ್ಡರ್ಸೆ ಅವರನ್ನು ನೆನಪಿನಲ್ಲಿಡುವ ಸಲುವಾಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಗಾಣಿಗ ಅಚ್ಲಾಡಿ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಬ್ರಹ್ಮಾವರ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ಪದಾಧಿಕಾರಿಗಳಾದ ಚಂದ್ರಶೇಖರ ಬೀಜಾಡಿ, ಮೋಹನ ಉಡುಪ, ಪ್ರವೀಣ ಮುದ್ದೂರು, ನಾಗರಾಜ ಅಲ್ತಾರು, ಗಣೇಶ ಸಾಹೇಬರಕಟ್ಟೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.