ಬ್ರಹ್ಮಾವರ: ವಿಜ್ಞಾನಿಗಳಾದ ಡಾ.ಹೀರಾಲಾಲ್ ಚೌಧರಿ, ಡಾ.ಆಲಿಕುನ್ನ್ಹಿ ಅವರು 1957ರ ಜುಲೈ 10ರಂದು ಮೊದಲ ಬಾರಿಗೆ ಅಭಿವೃದ್ಧಿಪಡಿಸಿದ ಮೀನುಗಳಲ್ಲಿ ಪ್ರಚೋದಿತ ಸಂತಾನೋತ್ಪತ್ತಿ ತಂತ್ರಜ್ಞಾನ ಇಂದು ಮತ್ಸ್ಯ ಕೃಷಿಯಲ್ಲಿ ಕ್ರಾಂತಿ ತಂದಿದ್ದು, ಜಲಕೃಷಿಯಲ್ಲಿ ಜಗತ್ತಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್ ತಿಳಿಸಿದರು.
ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ, ಮೀನುಗಾರಿಕಾ ಇಲಾಖೆ, ಜಿಲ್ಲಾ ಪಂಚಾಯಿತಿ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಮತ್ಸ್ಯ ಕೃಷಿಕರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಒಳನಾಡ ಮೀನುಗಾರಿಕೆ ಮತ್ತು ಜಲ ಕೃಷಿಗೆ ವಿಪುಲ ಅವಕಾಶವಿದ್ದು, ರೈತರು ಇಲಾಖೆಯ ಸೌಲಭ್ಯಗಳನ್ನು ಪಡೆದು ಮತ್ಸ್ಯಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಉತ್ತೇಜಿಸಿದರು.
ಮಂಗಳೂರಿನ ಕಡಲ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರದ ಉಪ ನಿರ್ದೇಶಕ ಮನೋಜ್ ಮಾತನಾಡಿ, ರಾಜ್ಯದ ಕರಾವಳಿಯಲ್ಲಿ ಪಚ್ಚಿಲೆ ಕೃಷಿಗೆ ಬಹಳ ಯೋಗ್ಯ ವಾತಾವರಣವಿದ್ದು, ಮೌಲ್ಯವರ್ಧನೆಯೊಂದಿಗೆ ರಪ್ತು ಮಾರುಕಟ್ಟೆಗೆ ಸರಬರಾಜು ಮಾಡಿ ಹೆಚ್ಚಿನ ಲಾಭ ಪಡೆಯಬಹುದು. ತಿಲಾಪಿಯದಂತಹ ಮೀನುಗಳನ್ನು ಸಿಹಿನೀರು ಕೊಳಗಳಲ್ಲಿ ಬಳಸಿ ಮತ್ಸ್ಯ ಕೃಷಿಯಿಂದ ಸ್ವಾವಲಂಬಿಯಾಗಬೇಕು ಎಂದು ಸಲಹೆ ನೀಡಿದರು.
ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಶಂಕರ್ ಮಾತನಾಡಿ, ಅಗ್ರಿ ಟೂರಿಸಂ ಅಡಿಯಲ್ಲಿ ಅಲಂಕಾರಿಕಾ ಮೀನು ಉತ್ಪಾದನೆ, ಕ್ರೀಡಾ ಮೀನುಗಾರಿಕೆಯನ್ನು ಅಭಿವೃದ್ದಿ ಪಡಿಸುವಲ್ಲಿ ನಮ್ಮ ಕೇಂದ್ರ ಕಾರ್ಯ ಪ್ರವೃತ್ತವಾಗಿದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಮತ್ಸ್ಯ ಕೃಷಿಕರಾದ ಐರೋಡಿಯ ಸದಾಶಿವ ಐತಾಳ, ಕಲ್ಯಾಣಪುರದ ವನಜಾ ಜೆ. ಪುತ್ರನ್, ಮುದರಂಗಡಿಯ ರಾಜೇಶ ಕುಲಾಲ ಅವರನ್ನು ಸನ್ಮಾನಿಸಲಾಯಿತು.
ಕೆವಿಕೆಯ ಸಹಾಯಕ ಪ್ರಾಧ್ಯಾಪಕ ಶ್ರೀನಿವಾಸ ಹುಲಕೋಟಿ, ವಿಜ್ಞಾನಿ ಡಾ.ಸದಾನಂದ ಅಚಾರ್ಯ, ಮೀನುಗಾರಿಕಾ ಇಲಾಖೆ ಸಹಾಯಕ ಉಪ ನಿರ್ದೇಶಕ ರವಿ, ಕಾರ್ಕಳ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಸುಮಲತಾ, ಕುಂದಾಪುರದ ಆಶಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.