ADVERTISEMENT

ಬ್ರಹ್ಮಾವರ: ಕೃಷಿ & ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಕೃಷಿ ಮೇಳ 11ರಿಂದ

ಹೊಸ ತಳಿಗಳ ಭತ್ತದ ಪರಿಚಯ, ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆ, ಚಿಟ್ಟೆ ಪಾರ್ಕ್

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 5:27 IST
Last Updated 9 ಅಕ್ಟೋಬರ್ 2025, 5:27 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬ್ರಹ್ಮಾವರ: ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಇದೇ 11 ಮತ್ತು 12ರಂದು ಕೃಷಿ ಮೇಳ ನಡೆಯಲಿದೆ ಎಂದು ಸಹ ಸಂಶೋಧನಾ ನಿರ್ದೇಶಕ ಧನಂಜಯ ತಿಳಿಸಿದರು.

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅಂಗ ಸಂಸ್ಥೆಗಳಾದ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ, ಉಳ್ಳಾಲದ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮೇಳ ನಡೆಯಲಿದೆ. ಕೃಷಿಕರಿಗೆ ಸಹ್ಯಾದ್ರಿ ಬ್ರಹ್ಮ, ಸಹ್ಯಾದ್ರಿ ಪಂಚಮುಖಿ, ಸಹ್ಯಾದ್ರಿ ಸಪ್ತಮಿ, ಕಜೆ 25-9 ಹಾಗೂ ಕೇಂದ್ರದಲ್ಲಿ ಪ್ರಸ್ತುತ ಪ್ರಯೋಗ ನಡೆಸಿರುವ ಇತರ ಭತ್ತದ ತಳಿಗಳನ್ನು ಪರಿಚಯಿಸಲಾಗುವುದು. ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಪರಿಚಯಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ADVERTISEMENT

ಕೃಷಿಯಲ್ಲಿ ಡ್ರೋನ್ ಬಳಕೆಯ ಪ್ರಾತ್ಯಕ್ಷಿಕೆ, ಸಿಒ-4, 5 ಮತ್ತು ಸಿಒಎಫ್‌ಎಸ್ - 29, 31 ಹಾಗೂ ಸೂಪರ್ ನೇಪಿಯರ್ ಮೇವಿನ ಬೆಳೆಗಳ ಪ್ರಾತ್ಯಕ್ಷಿಕೆ, ತೆಂಗಿನಲ್ಲಿ ಬಹುಬೆಳೆ ಯೋಜನೆ ಮತ್ತು ಪೋಷಕಾಂಶಗಳ ನಿರ್ವಹಣೆ, ತೋಟಗಾರಿಕೆ ಬೆಳೆಗಳಲ್ಲಿ ಕಸಿಕಟ್ಟುವಿಕೆ, ಸಾವಯವ ಗೊಬ್ಬರ, ಕಾಂಪೋಸ್ಟ್, ಎರಗೊಬ್ಬರ, ಅಜೋಲಾ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆ, ಹೈನುಗಾರಿಕೆ, ಮೀನುಗಾರಿಕೆ, ಆಡು, ಕೋಳಿ ಮತ್ತು ಬಾತುಕೋಳಿ ಸಾಕಾಣಿಕೆಗಳ ಪ್ರಾತ್ಯಕ್ಷಿಕೆ, ಜೈವಿಕ ಅನಿಲ ಉತ್ಪಾದನಾ ಘಟಕಗಳು, ಆಲಂಕಾರಿಕ ಮತ್ತು ಹೂವಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ, ಚಿಟ್ಟೆ ಪಾರ್ಕ್, ಕೃಷಿ ಪ್ರವಾಸೋದ್ಯಮ, ಜೇನು ಕೃಷಿ ಮತ್ತು ಆಕರ್ಷಕ ಕೃಷಿ ವಸ್ತು ಪ್ರದರ್ಶನಗಳೂ ಇರುತ್ತವೆ ಎಂದು ಅವರು ತಿಳಿಸಿದರು.

ಸುಮಾರು 300 ಎಕರೆ ಪ್ರದೇಶದಲ್ಲಿ ನಡೆಯುವ ಕೃಷಿ ಚಟುವಟಿಕೆಗಳ ಬಗ್ಗೆ ಕೃಷಿ ಪ್ರವಾಸ, ಚಿಟ್ಟೆ ಉದ್ಯಾನ, ಮಧುವನ, ಜೇನು ಪೆಟ್ಟಿಗೆ ಪ್ರದರ್ಶನ ಮತ್ತು ಮಾರಾಟ, ಸಮಗ್ರ ಕೃಷಿ ಘಟಕಗಳ ಕೇತ್ರ ಭೇಟಿ ಈ ಬಾರಿಯ ಕೃಷಿ ಮೇಳದಲ್ಲಿ ವಿಶೇಷ ಆಕರ್ಷಣೆಯಾಗಿದೆ.

ಉದ್ಘಾಟನೆ: ಅ.11ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳಕರ್ ಮೇಳ ಉದ್ಘಾಟಿಸುವರು. ಕೃಷಿ ವಸ್ತು ಪ್ರದರ್ಶನವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸುವರು. ಶಾಸಕ ಯಶ್‌ಪಾಲ್‌ ಸುವರ್ಣ ಅಧ್ಯಕ್ಷತೆ ವಹಿಸುವರು ಎಂದು ಅವರು ತಿಳಿಸಿದರು.

ಮೇಳದಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. 200 ಕ್ಕೂ ಅಧಿಕ ಮಳಿಗೆಗಳಲ್ಲಿ ಕೃಷಿ ಪರಿಕರಗಳ ವಸ್ತು ಪ್ರದರ್ಶನ ಇರಲಿದೆ. ಮೇಳದಲ್ಲಿ ಕರಾವಳಿ ಮತ್ತು ಇತರ ಜಿಲ್ಲೆಗಳ ಸುಮಾರು 2 ಲಕ್ಷ ರೈತರು ಭಾಗವಹಿಸುವ ನಿರೀಕ್ಷೆ ಇದ್ದು, ಎಲ್ಲರಿಗೂ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ವಿ ಸುಧೀರ ಕಾಮತ್‌ ಮತ್ತು ಶಂಕರ ಎಂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.