ADVERTISEMENT

ಬ್ರಹ್ಮಾವರ: ಭರದಿಂದ ಸಾಗಿದೆ ಬೆಲ್ಲ ತಯಾರಿ

ಪರಿಶುದ್ಧ ಬೆಲ್ಲಕ್ಕೆ ಬೇಡಿಕೆ ಹೆಚ್ಚು; ಕಬ್ಬಿನ ಕೊರತೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:23 IST
Last Updated 3 ಜನವರಿ 2026, 6:23 IST
ಮಾರಾಟಕ್ಕೆ ಸಿದ್ಧವಾದ ಬೆಲ್ಲದ ಡಬ್ಬಗಳು
ಮಾರಾಟಕ್ಕೆ ಸಿದ್ಧವಾದ ಬೆಲ್ಲದ ಡಬ್ಬಗಳು   

ಬ್ರಹ್ಮಾವರ: ಇಲ್ಲಿನ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯ ಆರಂಭಗೊಂಡಿದ್ದು, ಬೆಲ್ಲಕ್ಕೆ ಬೇಡಿಕೆ ಹೆಚ್ಚಿದ್ದರೂ ಕಬ್ಬಿನ ಕೊರತೆಯಿಂದ ಬೆಲ್ಲ ತಯಾರಿ ಕುಂಠಿತಗೊಂಡಿದೆ.

ಕಳೆದ ನಾಲ್ಕೈದು ವರ್ಷ ಕಾರ್ಖಾನೆ ಆಡಳಿತ ಮಂಡಳಿ ಉಸ್ತುವಾರಿಯಲ್ಲಿ ನಡೆದ ಬೆಲ್ಲ ತಯಾರಿ ಕಳೆದ ಬಾರಿಯಿಂದ ಜಿಲ್ಲಾಡಳಿತದ ಉಸ್ತುವಾರಿಯಲ್ಲಿ ನಡೆಯುತ್ತಿದೆ. ಕಳೆದ ವರ್ಷ ಸುಮಾರು 225 ಟನ್ ಕಬ್ಬು ಅರೆದು 21 ಸಾವಿರ ಕೆ.ಜಿ.ಗೂ ಹೆಚ್ಚು ಬೆಲ್ಲ ಉತ್ಪಾದನೆ ಮಾಡಲಾಗಿತ್ತು. ಈ ಬಾರಿ 500ರಿಂದ 600 ಟನ್ ಕಬ್ಬು ಅರೆಯಲು ಯೋಜನೆ ಇದೆ ಎಂದು ಕಾರ್ಖಾನೆಯ ಆಡಳಿತ ಮಂಡಳಿಯ ಅಧ್ಯಕ್ಷ ಬೆಳ್ವೆ ಸತೀಶ ಕಿಣಿ ತಿಳಿಸಿದ್ದಾರೆ.

ಪರಿಶುದ್ಧ ಬೆಲ್ಲಕ್ಕೆ ಬೇಡಿಕೆ: ಕಾರ್ಖಾನೆಯಲ್ಲಿ ಯಾವುದೇ ರಾಸಾಯನಿಕ ಬೆರೆಸದೆ ಪರಿಶುದ್ಧ ಬೆಲ್ಲ ತಯಾರಿಸಲಾಗುತ್ತಿರುವುದರಿಂದ ಇಲ್ಲಿ ತಯಾರಾದ ಬೆಲ್ಲಕ್ಕೆ ಹೆಚ್ಚು ಬೇಡಿಕೆ ಇದೆ. ಸದ್ಯ ಕೊಕ್ಕರ್ಣೆ, ಕುದಿ, ಪೆಜಮಂಗೂರು, ಕಾಡೂರು, ಕೆಂಜೂರು, ಕರ್ಜೆ , ಹಿರಿಯಡ್ಕ, ಬೆಳ್ಳಂಪಳ್ಳಿ, ಪೆರ್ಡೂರು, ನಂದಿಕೂರು, ಉಚ್ಚಿಲ, ಶಿರಿಯಾರ, ಅಲ್ತಾರು, ಬಾರ್ಕೂರು ಮೊದಲಾದ ಕಡೆ ಬೆಳೆದ ಕಬ್ಬನ್ನು ಟನ್‌ಗೆ ₹ 4 ಸಾವಿರ ನೀಡಿ ರೈತರಿಂದ ಖರೀದಿಸಲಾಗುತ್ತಿದೆ.

ADVERTISEMENT

ಸ್ಥಳೀಯವಾಗಿ ಕಬ್ಬಿನ ಕೊರತೆ ಮತ್ತು ಕಟಾವು ಮಾಡಲು ಜನರ ಕೊರತೆ ಇರುವ ಕಾರಣ ಹೊನ್ನಾಳಿ, ಶಿವಮೊಗ್ಗ, ಸಾಗರ, ಭದ್ರಾವತಿಯಿಂದ ಕಬ್ಬನ್ನು ತರಲು ನಿಶ್ಚಿಯಿಸಲಾಗಿದೆ. ಬೆಲ್ಲಕ್ಕೆ ಪ್ರತಿ ಕೆ.ಜಿ.ಗೆ ₹120 ನಿಗದಿಮಾಡಲಾಗಿದೆ. ಪ್ರತಿದಿನ 400 ರಿಂದ 500 ಕೆ.ಜಿ ಬೆಲ್ಲಕ್ಕೆ ಬೇಡಿಕೆ ಇದೆಯಾದರೂ ಕಬ್ಬಿನ ಕೊರತೆಯಿಂದ ನೀಡಲಾಗುತ್ತಿಲ್ಲ. ಶುದ್ಧ ಸಾವಯವ ಗುಣಮಟ್ಟಕ್ಕೆ ಇಲ್ಲಿನ ಬೆಲ್ಲ ಸಾಕ್ಷಿಯಾಗಿರುವುದರಿಂದ ಕಬ್ಬು ಅರೆಯುವ 3 ತಿಂಗಳೂ ಇಲ್ಲಿನ ಬೆಲ್ಲ ಪ್ರತಿದಿನ ಖಾಲಿಯಾಗಿ ಪ್ರತಿ ವರ್ಷ ಬೇಡಿಕೆ ಹೆಚ್ಚುತ್ತಿದೆ.

ಕಬ್ಬು ಬೆಳೆಯಲು ಪ್ರೋತ್ಸಾಹ: ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಬೆಳ್ವೆ ಸತೀಶ ಕಿಣಿ ಅವರ ಪ್ರಕಾರ ಮುಂದಿನ ವರ್ಷಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಕಬ್ಬು ಬೆಳೆಯಲು ಪ್ರೋತ್ಸಾಹ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ. ಮಂಡ್ಯದಿಂದ ಬೀಜವನ್ನು ತರಿಸಿ ರೈತರಿಗೆ ಮಾರಾಟ ಮಾಡಿ ಕಬ್ಬು ನೆಡಲು ಸೂಕ್ತ ಮಾರ್ಗದರ್ಶನ, ತರಬೇತಿ ನೀಡಿ ಹೆಚ್ಚು ಪ್ರದೇಶದಲ್ಲಿ ರೈತರು ಕಬ್ಬು ಬೆಳೆಸಲು ಪ್ರೋತ್ಸಾಹಿಸಲಾಗುವುದು ಎಂದು ಅವರು ತಿಳಿಸಿದರು.

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಚಿಂತನೆ: ಈಗಾಗಲೇ ಕೆಲವು ಖಾಸಗಿಯವರು ಬ್ರಹ್ಮಾವರದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲು ಮುಂದೆ ಬಂದಿದ್ದಾರೆ. ಆದ್ದರಿಂದ ಕಬ್ಬು ಬೆಳೆಯಲು ರೈತರನ್ನು ಉತ್ತೇಜಿಸುವ ಪ್ರಕ್ರಿಯೆ ಆರಂಭಿಸಲಿದ್ದೇವೆ.  ಕಾರ್ಖಾನೆ ಆರಂಭಿಸುವ ಬಗ್ಗೆ ಕೆಲವೊಂದು ಒಪ್ಪಂದ, ಷರತ್ತುಗಳಿಗೆ ಒಪ್ಪಿಗೆ ಆದಲ್ಲಿ ಇನ್ನು ಒಂದೆರಡು ವರ್ಷದಲ್ಲಿ ಬ್ರಹ್ಮಾವರದಲ್ಲಿ ಮತ್ತೆ ಸಕ್ಕರೆ ಕಾರ್ಖಾನೆ ಆರಂಭವಾಗುವುದು ಎಂದು ಸತೀಶ ಕಿಣಿ ಬೆಳ್ವೆ ಪ್ರಜಾವಾಣಿಗೆ ತಿಳಿಸಿದ್ದಾರೆ.

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಬೆಲ್ಲ ತಯಾರಿ ಭರದಿಂದ ಸಾಗಿದೆ.
ರೈತರಿಗೆ ಪ್ರೋತ್ಸಾಹ
ಒಂದೆರಡು ವರ್ಷದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವ ಬಗ್ಗೆ ಆಶಾದಾಯಕ ಬೆಳವಣಿಗೆ ಆಗುತ್ತಿರುವುದರಿಂದ ರೈತರ ಹಿತದೃಷ್ಟಿ ಇಟ್ಟುಕೊಂಡು ಮತ್ತು ಅವರಿಗೆ ಒಳ್ಳೆಯ ಬೆಲೆ ಸಿಗುವ ಬಗ್ಗೆ ಆಲೋಚಿಸಿ ಮುಂದಿನ ದಿನಗಳಲ್ಲಿ ಹೆಚ್ಚು ಪ್ರದೇಶದಲ್ಲಿ ಕಬ್ಬು ಬೆಳೆಯಲು ರೈತರನ್ನು ಪ್ರೋತ್ಸಾಹಿಸಲಾಗುವುದು ಎಂದು ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಅಧ್ಯಕ್ಷ ಸತೀಶ ಕಿಣಿ ಬೆಳ್ವೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.