ADVERTISEMENT

ಬ್ರಹ್ಮಾವರದ ಸರ್ವಿಸ್ ರಸ್ತೆ ಕಾಮಗಾರಿ ವಿಳಂಬ: ಜನರ ಆಕ್ರೋಶ

ವಿದ್ಯುತ್‌ ಕಂಬ ಸ್ಥಳಾಂತರ ಗೊಂದಲ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 7:21 IST
Last Updated 3 ಡಿಸೆಂಬರ್ 2025, 7:21 IST
ಬ್ರಹ್ಮಾವರದಲ್ಲಿ ಸ್ಥಗಿತಗೊಂಡಿರುವ ಸರ್ವಿಸ್‌ ರಸ್ತೆ ಕಾಮಗಾರಿ
ಬ್ರಹ್ಮಾವರದಲ್ಲಿ ಸ್ಥಗಿತಗೊಂಡಿರುವ ಸರ್ವಿಸ್‌ ರಸ್ತೆ ಕಾಮಗಾರಿ   

ಬ್ರಹ್ಮಾವರ: ನಗರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯ ಕಾಮಗಾರಿ ಕಳೆದ ಮೇ ತಿಂಗಳಿನಲ್ಲಿ ಆರಂಭಿಸಿ, ಮಳೆಗಾಲದಲ್ಲಿ ನಿಲ್ಲಿಸಿ ಮತ್ತೆ ಆರಂಭಿಸಿದ್ದರೂ, ಇದೀಗ ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸುವ ಗೊಂದಲದ ಕಾರಣ ಕಾಮಗಾರಿ ವಿಳಂಬವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸದ್ಯ ಬ್ರಹ್ಮಾವರದ ನಿರ್ಮಲಾ ಪಿಯು ಕಾಲೇಜಿನಿಂದ ಎಸ್‌.ಎಂ.ಎಸ್‌ ಕಾಲೆಜುವರೆಗಿನ ಹೆದ್ದಾರಿಯ ಎರಡೂ ಬದಿ ಸರ್ವಿಸ್‌ ರಸ್ತೆ ನಿರ್ಮಾಣಕ್ಕೆ ಕಳೆದ ಮೇ ತಿಂಗಳಿನಲ್ಲಿಯೇ ಮಣ್ಣು ತೆಗೆದ ಹೆದ್ದಾರಿ ಇಲಾಖೆ, ವಿದ್ಯುತ್‌ ಕಂಬಗಳ ತೆರವು ಆಗಿಲ್ಲ ಎಂದು ಕಾಮಗಾರಿಯನ್ನು ನಿಲ್ಲಿಸಿತ್ತು. ಈಗ ಮಳೆಗಾಲ ಕಳೆದು ಸುಮಾರು ಎರಡು ತಿಂಗಳು ಕಳೆದರೂ ಮತ್ತೆ ಕಾಮಗಾರಿ ಆರಂಭಿಸದ ಹೆದ್ದಾರಿ ಇಲಾಖೆಯ ಕಾರ್ಯವೈಖರಿಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ಮತ್ತು ಅಪೂರ್ಣಗೊಂಡ ಸರ್ವಿಸ್ ರಸ್ತೆ ಕಾಮಗಾರಿಯಿಂದ ಆಗುತ್ತಿದ್ದ ಸಾವು-ನೋವುಗಳನ್ನು ತಡೆಯಲು ಬ್ರಹ್ಮಾವರದ ನಾಗರಿಕರು ನಾಲ್ಕೈದು ತಿಂಗಳ ಹಿಂದೆ ಹೋರಾಟ ನಡೆಸಿ, ಸರ್ವಿಸ್ ರಸ್ತೆ ಮತ್ತು ಮೇಲ್ಲೇತುವೆ ನಿರ್ಮಿಸುವಂತೆ ಹೆದ್ದಾರಿ ಇಲಾಖೆ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದರು. ಸಂಸದರು, ಶಾಸಕರು, ಜಿಲ್ಲಾಧಿಕಾರಿ ಮತ್ತು ಸ್ಥಳೀಯವಾಗಿ ಹೋರಾಟ ಮಾಡುತ್ತಿದ್ದ ಪ್ರಮುಖರೊಂದಿಗೆ ಚರ್ಚಿಸಿ ಕಳೆದ ಮೇ ಅಂತ್ಯದಲ್ಲಿ ಸರ್ವಿಸ್ ರಸ್ತೆ ಕಾಮಗಾರಿ ಆರಂಭಿಸಲಾಗಿತ್ತು.

ADVERTISEMENT

ಸಾರ್ವಜನಿಕರು ಕೂಡಲೇ ಸರ್ವಿಸ್ ರಸ್ತೆ ನಿರ್ಮಾಣವಾಗುತ್ತದೆ. ಹೋರಾಟಕ್ಕೆ ಫಲ ದೊರೆಯಿತು ಎನ್ನುವಷ್ಟರಲ್ಲಿ ಮಳೆಗಾಲದ ನೆಪವೊಡ್ಡಿ ಕಾಮಗಾರಿ ನಿಲ್ಲಿಸಲಾಗಿತ್ತು.

ಕಂಬಗಳ ಸ್ಥಳಾಂತರದ ಸಮಸ್ಯೆ: ಸರ್ವಿಸ್‌ ರಸ್ತೆ ನಿರ್ಮಾಣಕ್ಕೂ ಮೊದಲು ಹೆದ್ದಾರಿ ಬದಿಯಲ್ಲಿರುವ ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸಬೇಕು. ಈ ಬಗ್ಗೆ ಮೆಸ್ಕಾಂ ಇಲಾಖೆಗೆ ತಗಲುವ ವೆಚ್ಚದ ಅಂದಾಜು ಪಟ್ಟಿಯ ಮೊತ್ತವನ್ನು ತಿಳಿಸುವಂತೆ ಕೋರಲಾಗಿತ್ತು.

‘ಮೆಸ್ಕಾಂ ಇಲಾಖೆ ಅಂದಾಜು ಮೊತ್ತ ನೀಡಿಲ್ಲ ಎನ್ನುವ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ ಎಂದು ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದರೆ, ಈಗಾಗಲೇ ಮೆಸ್ಕಾಂ ಬ್ರಹ್ಮಾವರ ಉಪವಿಭಾಗದಿಂದ ರಸ್ತೆ ನಿರ್ಮಾಣ ಮಾಡಲು ಅಡಚಣೆಯಾಗಿರುವ ಎಚ್‌.ಟಿ/ಎಲ್‌.ಟಿ ಮಾರ್ಗ ಮತ್ತು ಪರಿವರ್ತಕ ಕೇಂದ್ರವನ್ನು ಸ್ವಯಂ ಆರ್ಥಿಕ ಯೋಜನೆಯಡಿ ಬದಲಾಯಿಸಲು ಅಂದಾಜು ಪಟ್ಟಿಯನ್ನು ತಯಾರಿಸಿರುವ ಬಗ್ಗೆ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿರುವ  ಮಾಹಿತಿ ಲಭ್ಯವಾಗಿದೆ’ ಎಂದು ಸ್ಥಳೀಯ ಹೋರಾಟಗಾರ ಅಲ್ವಿನ್‌ ಅಂದ್ರಾಜೆ ತಿಳಿಸಿದ್ದಾರೆ.

 ‘ಹೆದ್ದಾರಿ ಇಲಾಖೆಯಿಂದ ಈಗಾಗಲೇ ಅಂದಾಜು ಪಟ್ಟಿಯ ಮೊತ್ತವನ್ನು ನೀಡುವಂತೆ ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದು ಒಂದು ವಾರದೊಳಗೆ ಮೊತ್ತವನ್ನು ಮೆಸ್ಕಾಂ ಗೆ ಪಾವತಿಸಿ ಕಾಮಗಾರಿ ಆರಂಭಿಸಲಾಗುವುದು’ ಎಂದು ಇಲಾಖೆಯ ಪ್ರಾಜೆಕ್ಟ್‌ ಮ್ಯಾನೇಜರ್‌ ಚಂದ್ರಶೇಖರ ಪ್ರಜಾವಾಣಿಗೆ ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ಅಪಘಾತ, ಸಾವು-ನೋವು ಆಗುವ ಮುನ್ನ ಎಲ್ಲರೂ ಎಚ್ಚೆತ್ತು ಕೂಡಲೇ ಕಾಮಗಾರಿ ಆರಂಭಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ವಿದ್ಯುತ್‌ ಕಂಬ ಸ್ಥಳಾಂತರಿಸುವ ಕಾರ್ಯ ಹೆದ್ದಾರಿ ಇಲಾಖೆಯೇ ಮಾಡುತ್ತದೆ. ಮೆಸ್ಕಾಂ ಅಂದಾಜು ಪಟ್ಟಿ ತಯಾರಿಸಿ ಹೆದ್ದಾರಿ ಇಲಾಖೆಗೆ ಮಾಹಿತಿ ನೀಡಿದೆ. ಹಣ ಪಾವತಿಸಿದ ಕೂಡಲೇ ಕಂಬಗಳ ಸ್ಥಳಾಂತರಕ್ಕೆ ಅವಕಾಶ ನೀಡಲಾಗುವುದು.
– ಪ್ರವೀಣ ಆಚಾರ್ಯ, ಮೆಸ್ಕಾಂ ಬ್ರಹ್ಮಾವರ

ಸಮಗ್ರ ವರದಿ ಸಿದ್ಧಪಡಿಸಲು ಅನುಮೋದನೆ

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಆಗುತ್ತಿರುವ ನಿರಂತರ ಅಫಘಾತಗಳು ಬಾಕಿ ಉಳಿದಿರುವ ಸರ್ವಿಸ್‌ ರಸ್ತೆಗಳು ಮೇಲ್ಸೇತುವೆ ನಿರ್ಮಾಣ ಯೋಜನೆಯ ಸಮಗ್ರ ವರದಿ ಸಿದ್ದಪಡಿಸಲು ಈಗಾಗಲೇ ಅನುಮೋದನೆ ದೊರೆತಿದೆ. ಬ್ರಹ್ಮಾವರ ಪೇಟೆ ಕೋಟ ತಿರುವು ಪಾಂಡೇಶ್ವರ ತೆಕ್ಕಟ್ಟೆ ಮುಂತಾದ ಪ್ರದೇಶಗಳಲ್ಲಿ ಮೇಲ್ಸೇತುವೆ ಸರ್ವಿಸ್‌ ರಸ್ತೆ ರಚನೆಯಾಗಲಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿ ಮೇರೆಗೆ ಇದನ್ನು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.