ADVERTISEMENT

ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಮರುಜೀವ

ರೈತರಿಗೆ ಉಚಿತ ಕಬ್ಬಿನ ಬೀಜ ವಿತರಣೆ ಮಾಡಲು ಕಾರ್ಖಾನೆ ನಿರ್ಧಾರ

ಬಾಲಚಂದ್ರ ಎಚ್.
Published 13 ನವೆಂಬರ್ 2018, 20:00 IST
Last Updated 13 ನವೆಂಬರ್ 2018, 20:00 IST
 ಬ್ರಹ್ಮಾವರ ಸಕ್ಕರೆ ಕಾರ್ಖಾನೆ(ಸಂಗ್ರಹ ಚಿತ್ರ)
 ಬ್ರಹ್ಮಾವರ ಸಕ್ಕರೆ ಕಾರ್ಖಾನೆ(ಸಂಗ್ರಹ ಚಿತ್ರ)   

ಉಡುಪಿ: ಕರಾವಳಿ ಭಾಗದ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಮತ್ತೆ ಪ್ರಯತ್ನಗಳು ಆರಂಭವಾಗಿವೆ. ರೈತರನ್ನು ಕಬ್ಬು ಬೆಳೆಯತ್ತ ಆಕರ್ಷಿಸಲು ಉಚಿತವಾಗಿ ಕಬ್ಬಿನ ಬೀಜಗಳನ್ನು ವಿತರಿಸಲು ಕಾರ್ಖಾನೆಯ ಆಡಳಿತ ಮಂಡಳಿ ನಿರ್ಧರಿಸಿದೆ. ಜತೆಗೆ, ಸರ್ಕಾರಕ್ಕೆ ₹ 30 ಕೋಟಿ ನೆರವಿಗೆ ಪ್ರಸ್ತಾಪ ಸಲ್ಲಿಸಿದೆ. ಈ ಪ್ರಯತ್ನಗಳಿಗೆ ಯಶಸ್ಸು ದೊರೆತರೆ 2020ರ ಅಂತ್ಯಕ್ಕೆ ಕಾರ್ಖಾನೆ ಮತ್ತೆ ಸದ್ದು ಮಾಡಲಿದೆ.

ಈ ಸಂಬಂಧ ಮುಂದಿನ ಕಾರ್ಯ ಯೋಜನೆಗಳ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಎಚ್‌.ಜಯಶೀಲ ಶೆಟ್ಟಿ, ‘ಕಾರ್ಖಾನೆ ಆರಂಭಕ್ಕೆ ಸಧ್ಯ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಎಲ್ಲೂ ಅಂದುಕೊಂಡಂತೆ ನಡೆದರೆ ಗತಕಾಲದ ವೈಭವ ಮರಳಲಿದೆ’ ಎಂಬ ಆಶಾಭಾವ ವ್ಯಕ್ತಪಡಿಸಿದರು.

ಸಕ್ಕರೆ ಕಾರ್ಖಾನೆಯ ಭವಿಷ್ಯ ಕಬ್ಬು ಬೆಳೆಗಾರರ ಮೇಲೆ ನಿಂತಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆದರೆ ಮಾತ್ರ ಕಾರ್ಖಾನೆ ಆರಂಭಿಸಲು ಸಾಧ್ಯ. ಈ ನಿಟ್ಟಿನಲ್ಲಿ ರೈತರನ್ನು ಉತ್ತೇಜಿಸಲು 200 ಎಕರೆಗೆ ಸಾಲುವಷ್ಟು ಉತ್ತಮ ತಳಿಯ ಕಬ್ಬಿನ ಬೀಜ ಅಥವಾ ಸಸಿಗಳನ್ನು ಉಚಿತವಾಗಿ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ವರಾಹಿ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಜಮೀನು ಹೊಂದಿರುವ ರೈತರಿಗೆ ಗರಿಷ್ಠ 2 ಎಕರೆಗೆ ಮೀರದಂತೆ ಕಬ್ಬಿನ ಬೀಜ ವಿತರಣೆ ಮಾಡಲಾಗುವುದು. ಇದಕ್ಕಾಗಿ ಮಂಡ್ಯದ ವಿ.ಸಿ. ಫಾರ್ಮ್‌ನಿಂದ ಉತ್ತಮ ತಳಿಯ ಬೀಜಗಳನ್ನು ತರಿಸಲಾಗುತ್ತಿದೆ. ರೈತರು ಎಷ್ಟು ಎಕರೆಯಲ್ಲಿ ಕಬ್ಬು ಬೆಳೆಯಲು ಸಿದ್ಧರಿದ್ದಾರೆ ಎಂಬ ಮಾಹಿತಿಯನ್ನು ನೀಡಿದರೆ ಬೀಜ ವಿತರಿಸಲಾಗುವುದು ಎಂದು ತಿಳಿಸಿದರು.

ಈಚೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉಡುಪಿಗೆ ಭೇಟಿ ನೀಡಿದ್ದಾಗ, ಜಿಲ್ಲೆಯಲ್ಲಿ ರೈತರು ಕಬ್ಬು ಬೆಳೆಯಲು ಮುಂದಾದರೆ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ, ಈ ಭಾಗದ ರೈತರ ಹಾಗೂ ಮುಖಂಡರ ಜತೆ ಸಭೆ ನೆಡೆಸಲಾಗಿದ್ದು, ಕಬ್ಬು ಬೆಳೆಯುವಂತೆ ಮನವಿ ಮಾಡಲಾಗಿದೆ. ರೈತರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಕಾರ್ಖಾನೆ ಆರಂಭಕ್ಕೆ ₹ 30 ಕೋಟಿ ಅವಶ್ಯವಿದೆ ಎಂದು ಪುಣೆ ಮೂಲದ ಖಾಸಗಿ ಕಂಪೆನಿಯೊಂದು ವರದಿ ನೀಡಿದೆ. ಈ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹಿರಿಯ ಮುಖಂಡ ಆಸ್ಕರ್ ಫರ್ನಾಂಡೀಸ್ ಸೇರಿದಂತೆ ಕರಾವಳಿ ಜನಪ್ರತಿನಿಧಿಗಳು ಹಣ ಬಿಡುಗಡೆಗೆ ಪ್ರಯತ್ನ ನಡೆಸುತ್ತಿದ್ದಾರೆ ಎಂದರು.

2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ₹ 13 ಕೋಟಿ ನೆರವು ನೀಡಿತ್ತು. ಇದನ್ನು ಬಳಸಿಕೊಂಡು ಕಾರ್ಖಾನೆಯ ಎಲ್ಲ ಸಾಲಗಳನ್ನು ತೀರಿಸಲಾಗಿದೆ. ರೈತರಿಗೆ ಕಬ್ಬಿನ ಬಾಕಿ ಪಾವತಿಸಲಾಗಿದೆ. 196 ಸಿಬ್ಬಂದಿಯನ್ನು ಕೆಲಸದಿಂದ ಬಿಡುಗಡೆ ಮಾಡಿ, ಬಾಕಿ ಚುಕ್ತಾ ಮಾಡಲಾಗಿದೆ. ಸರ್ಕಾರ ಈಗ 30 ಕೋಟಿ ನೆರವು ನೀಡಿದರೆ, ಸಂಪೂರ್ಣವಾಗಿ ಯಂತ್ರೋಪಕರಣಗಳ ಖರೀದಿಗೆ ಬಳಸಿಕೊಳ್ಳಲಾಗುವುದು ಎಂದರು.

ಕಾರ್ಖಾನೆ ಆರಂಭವಾದರೆ, ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಈ ಭಾಗದ ಆರ್ಥಿಕತೆಯೂ ಬಲಗೊಳ್ಳಲಿದೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಒಂದುವೇಳೆ ನೆರವು ಕೊಡದಿದ್ದರೆ, ಕಾರ್ಖಾನೆಗೆ ಸೇರಿರುವ 110 ಎಕರೆ ಜಾಗದಲ್ಲಿ ಸ್ವಲ್ಪ ಭಾಗವನ್ನು ಮಾರಾಟ ಮಾಡಿಯಾದರೂ ಕಾರ್ಖಾನೆ ಆರಂಭಿಸಲಾಗುವುದು ಎಂದು ಜಯಶೀಲ ಶೆಟ್ಟಿ ತಿಳಿಸಿದರು.

ಹಿಂದೆ, ವಾರಾಹಿ ನೀರಾವರಿ ಯೋಜನೆಯನ್ನು ನಂಬಿಕೊಂಡು ಸಕ್ಕರೆ ಕಾರ್ಖಾನೆ ಆರಂಭಿಸಲಾಯಿತು. ಕಾಮಗಾರಿ ವಿಳಂಬವಾಗಿ, ರೈತರ ಜಮೀನಿಗೆ ನೀರು ಹರಿಯಲಿಲ್ಲ. ಕಬ್ಬು ಬೆಳೆಯುವ ಪ್ರಮಾಣ ಕುಂಠಿತವಾಗಿ ಕಾರ್ಖಾನೆಯೂ ಬಂದ್ ಆಯಿತು. ಈಗ ಯೋಜನೆ ಮುಕ್ತಾಯ ಹಂತದಲ್ಲಿದ್ದು, ಈಗಾಗಲೇ 68 ಗ್ರಾಮಗಳ 15 ಸಾವಿರ ಎಕೆರೆಗೆ ನೀರು ಹರಿಯುತ್ತಿದೆ. ಮುಂದೆ ರೈತರು ಕಬ್ಬು ಬೆಳೆಯಲು ಮನಸ್ಸು ಮಾಡಬೇಕು ಎಂದು ಜಯಶೀಲ ಶೆಟ್ಟಿ ಮನವಿ ಮಾಡಿದರು.

ಕರಾವಳಿಯಲ್ಲಿ ಭತ್ತದ ಬೆಳೆಗಿಂತ ವಾಣಿಜ್ಯ ಬೆಳೆಯಾಗಿರುವ ಕಬ್ಬು ಹೆಚ್ಚು ಲಾಭದಾಯಕ. ಇಲ್ಲಿನ ಹವಾಗುಣದಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದುಕೃಷಿ ಸಂಶೋಧಕರು ಹೇಳಿದ್ದಾರೆ. ಜತೆಗೆ ಕಾರ್ಮಿಕರ ಶ್ರಮ ಕೂಡ ಹೆಚ್ಚು ಬೇಡುವುದಿಲ್ಲ. ರೈತರು ಇತ್ತ ಗಮನ ಹರಿಸಬೇಕು ಎಂದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.