ಕೋಟದ ಸ್ಥಳೀಯ ರೈತಧ್ವನಿ ಸಂಘಟನೆ ವತಿಯಿಂದ ನಡೆದ ಸಭೆಯಲ್ಲಿ ಭತ್ತಕ್ಕೆ ನ್ಯಾಯಯುತವಾದ ಬೆಲೆ ನಿಗದಿಪಡಿಸಬೇಕು ಎನ್ನುವ ರೈತರ ಬೇಡಿಕೆಗೆ ಅಕ್ಕಿ ಗಿರಣಿಗಳು ಸ್ಪಂದಿಸದಿರುವುದರಿಂದ ಹಾಗೂ ಕಟಾವು ಅವಧಿಯಲ್ಲಿ ಬೆಲೆ ಇಳಿಕೆ ತಂತ್ರ ಅನುಸರಿಸುತ್ತಿರುವ ಬಗ್ಗೆ ಅಸಮಾಧಾನ
ಕೋಟ: ಸ್ಥಳೀಯ ರೈತಧ್ವನಿ ಸಂಘಟನೆ ವತಿಯಿಂದ ನಡೆದ ಸಭೆಯಲ್ಲಿ ಭತ್ತಕ್ಕೆ ನ್ಯಾಯಯುತವಾದ ಬೆಲೆ ನಿಗದಿಪಡಿಸಬೇಕು ಎನ್ನುವ ರೈತರ ಬೇಡಿಕೆಗೆ ಅಕ್ಕಿ ಗಿರಣಿಗಳು ಸ್ಪಂದಿಸದಿರುವುದರಿಂದ ಹಾಗೂ ಕಟಾವು ಅವಧಿಯಲ್ಲಿ ಬೆಲೆ ಇಳಿಕೆ ತಂತ್ರ ಅನುಸರಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ನವೆಂಬರ್ ಪ್ರಥಮ ವಾರದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.
ರೈತಧ್ವನಿ ಸಂಘಟನೆ ಅಧ್ಯಕ್ಷ ಜಯರಾಮ ಶೆಟ್ಟಿ ಮಾತನಾಡಿ, ‘ಜಾಗತಿಕ ಬದಲಾವಣೆ, ಮಾರುಕಟ್ಟೆ ಮೌಲ್ಯ ಅವಲಂಬಿಸಿ ದರ ನಿಗದಿಯಾಗುತ್ತದೆ ಎನ್ನುವ ಮಿಲ್ ಮಾಲಕರ ಹೇಳಿಕೆ ಸತ್ಯಾಂಶದಿಂದ ಕೂಡಿಲ್ಲ. ಬೆಲೆ ನಿಗದಿಪಡಿಸುವಲ್ಲಿ ಮಿಲ್‌ಗಳ ಪಾತ್ರವೇ ಮುಖ್ಯವಾಗಿದೆ. ಆದರೆ, ರೈತರಿಂದ ಕಡಿಮೆ ಬೆಲೆಗೆ ಭತ್ತವನ್ನು ಖರೀದಿಸಿ, ಅದರ ಎರಡು-ಮೂರು ಪಟ್ಟು ಹೆಚ್ಚು ದರಕ್ಕೆ ಅಕ್ಕಿ ಮಾರಾಟ ಮಾಡಲಾಗುತ್ತದೆ. ಭತ್ತದಿಂದ ಹೊಟ್ಟು, ಬೂದಿ ಮೊದಲಾದ ಬೆಲೆ ಬಾಳುವ ವಸ್ತುಗಳು ಉತ್ಪತ್ತಿಯಾಗುತ್ತದೆ. ಆದರೆ, ಬೆಳೆದ ಭತ್ತಕ್ಕೆ ಬೆಲೆಯೇ ಇಲ್ಲ’ ಎಂದು ಹೇಳಿದರು.
ರೈತರು ಬೆಳೆದ ಬೆಳೆಗೆ ನ್ಯಾಯಯುತ ದರ ನೀಡದ ಮಿಲ್ ಮಾಲಕರ ಬಗ್ಗೆ ಕ್ರಮಕೈಗೊಳ್ಳುವಂತೆ ಈಗಾಗಲೇ ಜಿಲ್ಲಾಧಿಕಾರಿ, ಎಸ್.ಪಿ ಅವರಿಗೆ ಮನವಿ ನೀಡಲಾಗಿದೆ. ನವೆಂಬರ್ ಪ್ರಥಮ ವಾರದಲ್ಲಿ ರೈತರು ಕೋಟದಲ್ಲಿ ಸಭೆ ನಡೆಸಿ, ತೆಕ್ಕಟ್ಟೆ ತನಕ ಪಾದಯಾತ್ರೆ ನಡೆಸಿ ಅಲ್ಲಿನ ಅಕ್ಕಿ ಮಿಲ್‌ಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ರೈತಧ್ವನಿಯ ಪ್ರಮುಖ ಟಿ.ಮಂಜುನಾಥ ತಿಳಿಸಿದರು. ಈ ಬಗ್ಗೆ ರೈತರು ಸಹಮತ ವ್ಯಕ್ತಪಡಿಸಿದರು.
ರೈತ ಪ್ರಮುಖರಾದ ಭಾಸ್ಕರ ಶೆಟ್ಟಿ, ಶಿವಮೂರ್ತಿ, ಶಿವ ಪೂಜಾರಿ, ತಿಮ್ಮ ಕಾಂಚನ್, ಭೋಜ ಪೂಜಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.