
ಬ್ರಹ್ಮಾವರ: ಸಮಾಜದಲ್ಲಿ ಅಸ್ಪೃಶ್ಯತೆ ಇಂದು ಕಡಿಮೆಯಾಗಿರಬಹುದು. ಆದರೆ ನಮ್ಮ ಯುವಕರನ್ನು ಬಳಸಿಕೊಂಡು ಸುಳ್ಳು ದೌರ್ಜನ್ಯ ಪ್ರಕರಣ ದಾಖಲಿಸುವುದು ಜಾಸ್ತಿಯಾಗಿದೆ. ನಮ್ಮ ಸಮುದಾಯದ ಯುವಕರು ಜಾಗೃತರಾಗಬೇಕು. ಹಿರಿಯರು ಹೋರಾಟದ ಮಾರ್ಗದಿಂದ ಸಂಘಟನೆಗೆ ಬಲ ತುಂಬಿದ್ದು, ಆ ಮಾರ್ಗವನ್ನು ಮುಂದುವರಿಸಿ ಮುಂದಿನ ಜನಾಂಗಕ್ಕೆ ದಾಟಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು ಹೇಳಿದರು.
ಇಲ್ಲಿನ ಆಶ್ರಯ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ, ಶೋಷಿತ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಮಾತನಾಡಿ, ನಾವು ಪ್ರತಿಫಲಾಪೇಕ್ಷೆ ಇಲ್ಲದೆ ಶೋಷಿತರ, ಬಡವರ ಪರವಾಗಿ ಕೆಲಸ ಮಾಡುತ್ತೇವೆ. ಕೊಲ್ಲೂರಿನಲ್ಲಿ ಗಂಗೆ ಕೊರಗ ಅವರ ಮನೆಯನ್ನು ಜೆಸಿಬಿಯಿಂದ ಕೆಡವಿದಾಗ ದಲಿತ ಸಂಘರ್ಷ ಸಮಿತಿ ಮುಂದೆ ನಿಂತು ಹೋರಾಟ ನಡೆಸಿ ಅವರಿಗೆ ಅದೇ ಜಾಗದಲ್ಲಿ ನಿವೇಶನ, ಮನೆ ಕೊಡಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಅಂದು ಕಾಂಗ್ರೆಸ್ ಸರ್ಕಾರ ಮೀಸಲಾತಿ ತಂದು ಅಭಿವೃದ್ಧಿಗೆ ಸಹಕಾರ ನೀಡಿದೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿದರು. ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಭಾಸ್ಕರ ಮಾಸ್ಟರ್ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರೌಢಶಾಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ, ದಕ್ಷಿಣ ಭಾರತ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ಕಲ್ಕತ್ತಾದಲ್ಲಿ ನಡೆಯುವ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನಾಟಕ ‘ಕ್ಯೂರಿಯಸ್’ ರಚನೆಕಾರ ವರದರಾಜ ಬಿರ್ತಿ, ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಪಡೆದ ರೋಹಿತ್ ಬೈಕಾಡಿ ಅವರನ್ನು ಸನ್ಮಾನಿಸಲಾಯಿತು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಎಸ್. ನಾರಾಯಣ, ಸಂಘಟನೆಯ ಪ್ರಮುಖರಾದ ವಸಂತಿ ಶಿವಾನಂದ, ಗೀತಾ ಸುರೇಶ್ ಕುಮಾರ್, ಕುಸುಮಾ ಕಟ್ಕರೆ, ಅಣ್ಣಪ್ಪ ನಕ್ರೆ, ಸುರೇಶ್ ಹಕ್ಲಾಡಿ, ಮಂಜುನಾಥ ನಾಗೂರು, ಭಾಸ್ಕರ ನಿಟ್ಟೂರು, ಶಿವರಾಜ್ ಬೈಂದೂರು, ರಾಘವ ಕುಕ್ಕುಜೆ, ಶಂಕರದಾಸ್ ಚೇಂಡ್ಕಳ, ದೇವು ಹೆಬ್ರಿ, ರಾಜೇಂದ್ರನಾಥ ಕಾಪು, ಕುಮಾರ್ ಕೋಟ, ಶ್ಯಾಮ ಸುಂದರ್ ತೆಕ್ಕಟ್ಟೆ ಭಾಗವಹಿಸಿದ್ದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸುಧಾಕರ ಮಾಸ್ಟರ್ ವಂದಿಸಿದರು. ಶರತ್ ಆರೂರು, ಲಿಂಗಪ್ಪ ಮಾಸ್ಟರ್ ಬಿರ್ತಿ, ಸದಾನಂದ ಹಂಗಾರಕಟ್ಟೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.