
ಕಾರ್ಕಳ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿರುವ ಬಿಎಸ್ಸಿ ನರ್ಸಿಂಗ್ ಕಾಲೇಜಿನ ಮೂಲ ಸೌಕರ್ಯ, ಉಪನ್ಯಾಸಕರ ಕೊರತೆ ಪರಿಹರಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಆವರಣದಿಂದ ತಾಲ್ಲೂಕು ಕಚೇರಿಯವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.
ಎಬಿಪಿವಿ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಗಣೇಶ್ ಪೂಜಾರಿ ಮಾತನಾಡಿ, 2022ರ ಏಪ್ರಿಲ್ ನಲ್ಲಿ ಕಾರ್ಕಳ ಸರ್ಕಾರಿ ತಾಲ್ಲೂಕು ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ಬಿಎಸ್ಸಿ ನರ್ಸಿಂಗ್ ಆರಂಭಗೊಂಡಿದೆ. ಕಾಲೇಜು ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿರುವ ಏಕೈಕ ಸರ್ಕಾರಿ ಬಿಎಸ್ಸಿ ನರ್ಸಿಂಗ್ ಕಾಲೇಜು ಇದಾಗಿದ್ದು, ಕಾಲೇಜು ಸ್ಥಾಪನೆಯಾಗಿ ನಾಲ್ಕು ವರ್ಷ ಕಳೆದರೂ ಈ ತನಕ ಸ್ವಂತ ಕಟ್ಟಡ, ಅಗತ್ಯ ಉಪನ್ಯಾಸಕರು ಇಲ್ಲಿಲ್ಲ ಎಂದರು.
ನಾಲ್ಕು ವರ್ಷಗಳ ಈ ಕೋರ್ಸ್‌ಗೆ ಪ್ರತಿ ಬ್ಯಾಚ್‌ಗೆ 40 ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶವಿದ್ದು, ಒಟ್ಟು 160 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಾಲೇಜಿಗೆ ಐಎನ್‌ಸಿ ಮಾನ್ಯತೆ ದೊರೆಯದಿರುವುದರಿಂದ ಕಾಲೇಜಿನಲ್ಲಿ ಕಲಿತವರು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಮತ್ತು ವಿದೇಶಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು. ಕಾಲೇಜಿಗೆ ತಾತ್ಕಾಲಿಕವಾಗಿ ಒದಗಿಸಿರುವ ಆಸ್ಪತ್ರೆಯ ಹಳೆಯ ಕಟ್ಟಡ ಸೋರುತ್ತಿದೆ ಎಂದರು.
ಹೊಸ ಕಟ್ಟಡ ನಿರ್ಮಾಣವಾಗುವರೆಗೆ ಹಳೆಯ ಕಟ್ಟಡವನ್ನು ತುರ್ತಾಗಿ ದುರಸ್ತಿಗೊಳಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ವಿದ್ಯಾರ್ಥಿಗಳಾದ ಸಚಿನ್, ಕಿರಣ್, ನಿತೇಶ್, ರಂಜಿತಾ, ದೀಪಾ, ಕೃತಿ, ಶ್ರೇಯಸ್ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.