ADVERTISEMENT

ಬಸ್‌ಗಳಲ್ಲಿ ಅಂತರ ಪಾಲಿಸದಿದ್ದರೆ ಪ್ರಕರಣ: ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 12:58 IST
Last Updated 11 ಜೂನ್ 2020, 12:58 IST
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಖಾಸಗಿ ಬಸ್ ಮಾಲೀಕರ ಹಾಗೂ ಅಧಿಕಾರಿಗಳ ಸಭೆ ನಡೆಯಿತು.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಖಾಸಗಿ ಬಸ್ ಮಾಲೀಕರ ಹಾಗೂ ಅಧಿಕಾರಿಗಳ ಸಭೆ ನಡೆಯಿತು.   

ಉಡುಪಿ: ಬಸ್‌ಗಳಲ್ಲಿ ನಿಗದಿತ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂಬ ದೂರುಗಳು ಹೆಚ್ಚಾಗುತ್ತಿದ್ದು, ಅಂತರ ಪಾಲಿಸದಿದ್ದರೆ ಎಪಿಡೆಮಿಕ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾದಿಕಾರಿ ಜಿ.ಜಗದೀಶ್ ಸೂಚನೆ ನೀಡಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಖಾಸಗಿ ಬಸ್ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ಸೋಂಕು ಹರಡುವಿಕೆ ತಡೆಗೆ ಬಸ್‌ಗಳಲ್ಲಿ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಅವಶ್ಯಕ. ಆದರೆ, ಬಸ್‌ಗಳಲ್ಲಿ ಅಂತರ ಕಾಯ್ದುಕೊಳ್ಳದಿರುವುದು, ನಿಗದಿತ ಸಂಖ್ಯೆಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುತ್ತಿರುವುದು ಗಮನಕ್ಕೆ ಬಂದಿದೆ. ನಿಯಮ ಉಲ್ಲಂಘಿಸಿದರೆ ಸಾರಿಗೆ ಕಾಯ್ದೆಯ ಬದಲು, ಎಪಿಡೆಮಿಕ್ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿದರು.

30ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ. ಸ್ಯಾನಿಟೈಸರ್ ಇರಬೇಕು. ಮಾಸ್ಕ್ ಇಲ್ಲದವರಿಗೆ ಪ್ರವೇಶ ನೀಡಬಾರದು. ನಿಯಮ ಪಾಲಿಸುವಂತೆ ಬಸ್ ಮಾಲೀಕರು ಸಿಬ್ಬಂದಿಗೆ ನಿರ್ದೇಶನ ನೀಡಬೇಕು. ಈ ಸಂಬಂಧಸಾರಿಗೆ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು ಎಂದರು.

ADVERTISEMENT

ನಿರ್ಧಿಷ್ಟ ಸಮಯದಲ್ಲಿ ಮಾತ್ರ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಉಳಿದ ಅವಧಿಯಲ್ಲಿ ಕಡಿಮೆ ಇರುತ್ತದೆ. ಇದರಿಂದ ಅಂತರ ಪಾಲನೆ ಕಷ್ಟವಾಗುತ್ತದೆ ಎಂದು ಬಸ್ ಮಾಲೀಕರು ಸಮಸ್ಯೆ ಹೇಳಿಕೊಂಡರು.ಹೆಚ್ಚು ಪ್ರಯಾಣಿಕರು ಬರುವ ಸಮಯದಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಿ, ಅಂತರ ಕಾಯ್ದುಕೊಳ್ಳುವಿಕೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್‌ಪಿ ಕುಮಾರ ಚಂದ್ರ, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ, ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಕಾರ್ಯದರ್ಶಿ ಸದಾನಂದ ಛಾತ್ರ, ಉಡುಪಿ ಸರ್ವಿಸ್ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಕರಾವಳಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್, ಶಿರ್ವ ಬಸ್ ಮಾಲೀಕರ ಸಂಘದ ಅಧ್ಯಕ್ಷ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.