ADVERTISEMENT

ಬೈಂದೂರು | ‘ಸರ್ಕಾರಿ ಆಸ್ಪತ್ರೆ ಸೌಲಭ್ಯ ಬಳಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 5:48 IST
Last Updated 24 ಸೆಪ್ಟೆಂಬರ್ 2025, 5:48 IST
ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಮತ್ತು ಎನ್‌ಸಿಡಿ ಕ್ಯಾಂಪ್ ಅನ್ನು ಕಾಲ್ತೋಡು ಗ್ರಾಪಂ ಅಧ್ಯಕ್ಷ ಚಿಕ್ಕಯ್ಯ ಶೆಟ್ಟಿ ಉದ್ಘಾಟಿಸಿದರು.
ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಮತ್ತು ಎನ್‌ಸಿಡಿ ಕ್ಯಾಂಪ್ ಅನ್ನು ಕಾಲ್ತೋಡು ಗ್ರಾಪಂ ಅಧ್ಯಕ್ಷ ಚಿಕ್ಕಯ್ಯ ಶೆಟ್ಟಿ ಉದ್ಘಾಟಿಸಿದರು.   

ಬೈಂದೂರು: ‘ಗ್ರಾಮದಲ್ಲಿ ಎಲ್ಲರೂ ಆರೋಗ್ಯವಂತರಾಗಿದ್ದರೆ ಅದನ್ನು ಸ್ವಾಸ್ಥ್ಯಯುತ ಮಾದರಿ ಗ್ರಾಮ ಎನ್ನಬಹುದು. ಈ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುವ ಉಚಿತ ಸೇವೆ, ಆರೋಗ್ಯದ ಅರಿವು ಎಲ್ಲರೂ ಪಡೆಯುವಂತಾಗಲಿ’ ಎಂದು ಕಾಲ್ತೋಡು ಗ್ರಾ.ಪಂ. ಅಧ್ಯಕ್ಷ ಚಿಕ್ಕಯ್ಯ ಶೆಟ್ಟಿ ಹೇಳಿದರು.

ಆಯುಷ್ ಇಲಾಖೆ ಉಡುಪಿ, ಕಾಲ್ತೋಡು ಗ್ರಾ.ಪಂ, ಕಾಲ್ತೋಡು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಆಯುಷ್ಮಾನ್ ಆರೋಗ್ಯ ಮಂದಿರದ ಆಶ್ರಯದಲ್ಲಿ 10ನೇ ಆಯುರ್ವೇದ ದಿನಾಚರಣೆ ಪೂರ್ವಭಾವಿಯಾಗಿ ನಡೆದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ, ಎನ್‌ಸಿಡಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ನಮ್ಮ ಹಿರಿಯರು ಪಾರಂಪರಿಕ ಜೀವನಶೈಲಿ, ಆಹಾರ ಪದ್ಧತಿ ಪಾಲಿಸುತ್ತಿದ್ದರು. ಪ್ರಸ್ತುತ ಜೀವನಶೈಲಿ ಆಧುನಿಕತೆಗೆ ಬದಲಾಗಿದ್ದು, ಮನುಷ್ಯ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದಾನೆ ಎಂದು ಖೇದ ವ್ಯಕ್ತಪಡಿಸಿ, ಆಯುರ್ವೇದದ ಮಹತ್ವ ತಿಳಿದು ಎಲ್ಲರೂ ಅದನ್ನು ಅನುಸರಿಸಿ ಎಂದು ಸಲಹೆ ನೀಡಿದರು.

ADVERTISEMENT

ಕಾಲ್ತೋಡು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ವೀಣಾ ಕಾರಂತ್ ಮಾತನಾಡಿ, ‘ಜನರಿಗಾಗಿ ಮತ್ತು ಜಗತ್ತಿಗಾಗಿ’ ಎಂಬ ಘೋಷವಾಕ್ಯದೊಂದಿಗೆ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ ನಡೆಯುತ್ತಿರುವ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರದ ಉದ್ದೇಶ, ಅಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿದರು.

ಆಯುರ್ವೇದ ದಿನಾಚರಣೆಯ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಸಾರ್ವಜನಿಕರಿಗೆ ಆಯುಷ್ ಇಮ್ಯೂನಿಟಿ ಕಿಟ್, ಔಷಧಿ ಸಸ್ಯಗಳನ್ನು ವಿತರಿಸಲಾಯಿತು. ಯೋಗ ತರಬೇತುದಾರ ಶೇಖರ ಶೆಟ್ಟಿ, ಸರಸ್ವತಿ ಕುಲಾಲ್ ಅವರು ಸಾರ್ವಜನಿಕರಿಗೆ ಯೋಗ, ಪ್ರಾಣಾಯಾಮದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಸಾರ್ವಜನಿಕರಿಗೆ ರಕ್ತದೊತ್ತಡ, ಮಧುಮೇಹ, ಆರೋಗ್ಯ ತಪಾಸಣೆ ನಡೆಸಿ ಆಯುರ್ವೇದ ಚಿಕಿತ್ಸೆ ನೀಡಲಾಯಿತು.

ಗ್ರಾ.ಪಂ. ಕಾರ್ಯದರ್ಶಿ ಆನಂದ ಬಿಲ್ಲವ, ಸದಸ್ಯ ಶೇಖರ ಶೆಟ್ಟಿ, ಕಿರಿಮಂಜೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಎಚ್‌ಒ ಸುಭಾಸ್, ಪಿಎಚ್‌ಸಿಒ ಪ್ರತಿಮಾ ಭಾಗವಹಿಸಿದ್ದರು. ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಸಿಬ್ಬಂದಿ ನಾಗದೀಪ, ಸರಸ್ವತಿ, ವಿಶಾಲಾ, ಆಶಾ ಕಾರ್ಯಕರ್ತೆಯರು ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.