
ಬೈಂದೂರು: ರೈತರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗ, ಹಿಂದುಳಿದ ವರ್ಗದವರು ಸ್ವಾಭಿಮಾನ, ಗೌರವಯುತ ಬದುಕು ನಡೆಸಲು ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ತಂದಿದೆ. ಸ್ವದೇಶಿ, ಆತ್ಮನಿರ್ಭರ್ ಭಾರತ್ ಮುಂತಾದ ಯೋಜನೆಗಳ ಮೂಲಕ 2047ನೇ ಇಸವಿಯಲ್ಲಿ ಸ್ವಾವಲಂಬಿ ದೇಶ ಕಟ್ಟುವಲ್ಲಿ ಮೋದಿಯವರ ಪ್ರಯತ್ನಕ್ಕೆ ನಾವು ಅಭಿನಂದನೆ ಸಲ್ಲಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಇಲ್ಲಿನ ರೋಟರಿ ಭವನದಲ್ಲಿ ಸೋಮವಾರ ಕೇಂದ್ರ ಸರ್ಕಾರದ ವಿವಿಧ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಿ.ಎಂ.ಸಕ್ಷಮ್ ಯೋಜನೆಯಡಿ ಅಂಗನವಾಡಿಗಳಿಗೆ ಟಿ.ವಿ., ಪಿ.ಎಂ.ಸೂರ್ಯ ಘರ್ ಉಚಿತ ಯೋಜನೆಯಡಿ ಸಬ್ಸಿಡಿ ಚೆಕ್, ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಹೊಲಿಗೆ ಯಂತ್ರ, ಕ್ರಷಿ ಇಲಾಖೆಯಿಂದ ನೀರಾವರಿ ಪೈಪ್ ಸೆಟ್ ಫಲಾನುಭವಿಗಳಿಗೆ ವಿತರಿಸಲಾಯಿತು.
ಶಾಸಕ ಗುರುರಾಜ್ ಗಂಟಿಹೊಳೆ, ತಹಶೀಲ್ದಾರ್ ರಾಮಚಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿ.ಡಿ.ಪಿ.ಒ ಉಮೇಶ್ ಟಿ.ಎಲ್, ಪಿ.ಎಂ.ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಎಂಜಿನಿಯರ್ ಯಶವಂತ, ಅನುಷ್ಠಾನ ಸಮಿತಿ ಸದಸ್ಯ ಶೇಖರ ಪೂಜಾರಿ, ಪಿ.ಎಂ.ವಿಶ್ವಕರ್ಮ ಯೋಜನೆಯ ಸಹಾಯಕ ಅಂಚೆ ಅಧೀಕ್ಷಕ ಮಹೇಶ್ ವಡೆಯರ್, ದಿಶಾ ಸಮಿತಿ ಅಧ್ಯಕ್ಷ ರಮೇಶ್ ಪೂಜಾರಿ, ತಾಲ್ಲೂಕು ಕೃಷಿ ಇಲಾಖೆ ಅಧಿಕಾರಿ ಗಾಯತ್ರಿ ದೇವಿ ಜೆ, ಬೈಂದೂರು– ಕುಂದಾಪುರ ತಾಲ್ಲೂಕು ಪಂಚಾಯಿತಿ ಎನ್.ಆರ್.ಎಲ್.ಎಂ.ನ ಪ್ರಶಾಂತ್ ಭಾಗವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ಬೆಸ್ಕೂರು ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.