ಪ್ರಾತಿನಿಧಿಕ ಚಿತ್ರ
ಬೈಂದೂರು: ಪಟ್ಟಣ ಪಂಚಾಯಿತಿಯಿಂದ ಗ್ರಾಮೀಣ ಪ್ರದೇಶಗಳನ್ನು ಬೇರ್ಪಡಿಸಿ ಗ್ರಾಮ ಪಂಚಾಯಿತಿ ರಚನೆ ಮಾಡಬೇಕೆಂದು ಆಗ್ರಹಿಸಿ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ 17ನೇ ದಿನಕ್ಕೆ ಕಾಲಿಟ್ಟಿದ್ದು, ಮೀನುಗಾರಿಕಾ ಸಚಿವ ಎಸ್. ಮಂಕಾಳ ವೈದ್ಯ ಅವರು ಬುಧವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿದರು.
ಬಳಿಕ ಮಾತನಾಡಿದ ಆವರು, ಬೈಂದೂರು ತಾಲ್ಲೂಕಾಗಿ ರಚನೆಗೊಂಡಿರುವಾಗ ಪಟ್ಟಣ ಪಂಚಾಯಿತಿ ಇಲ್ಲದೇ ಇರುವುದು ಸರಿಯಲ್ಲ. ಈಗಾಗಲೇ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಈ ಕುರಿತು ವಿಷಯವನ್ನು ತಿಳಿಸಿದ್ದಾರೆ. ರೈತರ ಹೋರಾಟ ನ್ಯಾಯ ಸಮ್ಮತವಾಗಿದೆ. ಜಿಲ್ಲಾಧಿಕಾರಿ ಕಳುಹಿಸಿರುವ ವರದಿಯನ್ನು ಆಧರಿಸಿ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಯಾಯ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಧರಣಿಯನ್ನು ಕೈಬಿಡಲು ಸಚಿವರು ಕೇಳಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ರೈತರು ಸಚಿವಾಲಯ, ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಲಿಖಿತ ಉತ್ತರ ದೊರಕಿದರೆ ಧರಣಿ ಕೈಬಿಡಲು ಸಿದ್ದರಿದ್ದೇವೆ ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಶಿರೂರು ರೈತ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ, ಹರೀಶ್ ತೋಳಾರ್, ರಘುರಾಮ ಕೆ.ಪೂಜಾರಿ, ಸುಭಾಷ ಗಂಗನಾಡು, ಮ್ಯಾಥ್ಯೂ ಕೆ.ಎಸ್., ರವೀಂದ್ರ ಶೆಟ್ಟಿ ಪಟೇಲ್, ಹೆರಿಯ ಪೂಜಾರಿ, ಚಿಕ್ಕು ಪೂಜಾರಿ, ಪದ್ಮಾಕ್ಷ ಗೋಳಿಬೇರು, ಕೃಷ್ಣ ದೇವಾಡಿಗ, ದೊಟ್ಟಯ್ಯ ಪೂಜಾರಿ, ವೆಂಕಟ ಪೂಜಾರಿ ಶಿರೂರು ಉಪಸ್ಥಿತದ್ದರು.
ಅರುಣ್ ಕುಮಾರ್ ಶಿರೂರು ಸ್ವಾಗತಿಸಿದರು. ವೀರಭದ್ರ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.