ಬೈಂದೂರು: ತಾಲ್ಲೂಕಿನ ವಿವಿಧೆಡೆ ಮಂಗಗಳ ಹಾವಳಿ ವಿಪರೀತವಾಗುತ್ತಿದ್ದು, ಸಾರ್ವಜನಿಕರಿಗೆ, ಕೃಷಿಕರಿಗೆ ಸಂಕಷ್ಟ ಎದುರಾಗಿದೆ.
ಮಂಗಗಳ ಹಿಂಡು ತೋಟಗಳಿಗೆ ಲಗ್ಗೆ ಇಡುತ್ತಿದ್ದು, ತೆಂಗಿನ ಮರಹತ್ತಿ ಸೀಯಾಳ ಕುಡಿದು ಕಿತ್ತೆಸೆಯುತ್ತಿವೆ. ಹಿಂಡು ಹಿಂಡಾಗಿ ದಾಳಿ ಮಾಡುವ ಮಂಗಗಳು ಎಗ್ಗಿಲ್ಲದೆ ತೆಂಗಿನ ಫಸಲನ್ನು ನಾಶ ಮಾಡುತ್ತಿವೆ. ತೆಂಗು ಮಾತ್ರವಲ್ಲದೇ ಅಡಕೆ ತೋಟಗಳಲ್ಲಿ ಅಡಕೆ ಕಿತ್ತು ಹಾಕುವ ಜೊತೆಗೆ ಹಿಂಗಾರವನ್ನು ಹಾಳು ಮಾಡುತ್ತಿವೆ. ಬಾಳೆಮರದ ಮೊಳಕೆ, ಪಪ್ಪಾಯ, ಪೇರಳೆ, ತರಕಾರಿ ಬೆಳೆಯೂ ಮಂಗಗಳ ಪಾಲಾಗುತ್ತಿದೆ.
ಒಂದು ಬಾರಿ ಮಂಗಗಳು ದಾಳಿ ನಡೆಸುವ ತೆಂಗಿನ ಮರದಲ್ಲಿ ಶೇ 60ರಿಂದ ಶೇ 70ರಷ್ಟು ಫಸಲು ನಷ್ಟವಾಗುತ್ತದೆ. ಹೀಗಾಗಿ ಸೀಯಾಳ ಮತ್ತು ತೆಂಗಿನ ಇಳುವರಿ ಕಡಿಮೆಯಾಗಿದೆ ಎಂದು ಕೃಷಿಕರು ದೂರಿದ್ದಾರೆ.
ಈ ಬಾರಿ ತೆಂಗಿಗೆ ಉತ್ತಮ ಬೆಲೆ ಇದೆ. ಆದರೆ, ಬೆಳೆ ಮಂಗಗಳ ಪಾಲಾಗುತ್ತಿದ್ದು, ಕೃಷಿಕರು ಕಂಗಾಲಾಗಿದ್ದಾರೆ. ಮಂಗಗಳ ಹಾವಳಿಯಿಂದ ಬೇಸತ್ತ ಜನ ಅವುಗಳನ್ನು ಓಡಿಸುವ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಪಟಾಕಿ, ಹುಸಿ ಗುಂಡು ಸೇರಿದಂತೆ ಹಲವಾರು ಉಪಾಯಗಳನ್ನು ಮಾಡಿದ್ದಾರೆ. ಮೊದ ಮೊದಲು ಹೆದರುತ್ತಿದ್ದ ಮಂಗಗಳು ಇತ್ತೀಚಿನ ದಿನಗಳಲ್ಲಿ ಅವುಗಳಿಗೆ ಜಗ್ಗುತ್ತಿಲ್ಲ ಎನ್ನುತ್ತಾರೆ ಬೆಳೆಗಾರರು.
ಮಂಗಗಳು ಬೆಳೆಗಾರರ ಮೇಲೆಯೇ ದಾಳಿ ನಡೆಸಿದ ಪ್ರಕರಣಗಳೂ ಒಂದೆರಡು ನಡೆದಿವೆ. ಮನೆಯ ಮೇಲಿನ ಡಿ.ಟಿ.ಎಚ್. ಡಿಶ್ ಆ್ಯಂಟನಾ, ಡಿಶ್ ಕೇಬಲ್‌ಗಳು, ವಾಟರ್ ಟ್ಯಾಂಕ್, ನಲ್ಲಿ, ಅಂಗಡಿಗಳ ಬೋರ್ಡುಗಳು, ಸಿ.ಸಿ. ಟಿವಿ ಕ್ಯಾಮೆರಾ ಇನ್ನಿತರ ವಸ್ತುಗಳನ್ನು ಹಾಳುಗೆಡವುತ್ತಿವೆ. ಮನೆಯ ಅಂಗಳದವರೆಗೂ ಕಾಲಿಡುವ ಮಂಗಗಳು ಕೆಲವು ಕಡೆಗಳಲ್ಲಿ ಮನೆಗಳ ಒಳಗೆ ನುಗ್ಗಿ ಆಹಾರ ಪದಾರ್ಥಗಳನ್ನು ತಿನ್ನುವಷ್ಟು ಮುಂದುವರಿದಿವೆ ಎನ್ನುತ್ತಾರೆ ಜನರು.
ವನ್ಯಜೀವಿಗಳ ಉಪಟಳದಿಂದ ಬೆಳೆಹಾನಿ ಸಂಭವಿಸಿದಲ್ಲಿ ಸರ್ಕಾರದಿಂದ ನಷ್ಟ ಪರಿಹಾರ ಪಡೆಯಬಹುದು. ಮಂಗಗಳನ್ನು ವನ್ಯ ಜೀವಿ ಎಂದು ಹೇಳಲಾಗುತ್ತಿದ್ದರೂ ಸರ್ಕಾರ ಮಂಗಗಳನ್ನು ವನ್ಯಜೀವಿ ಎಂದು ಒಪ್ಪುತ್ತಿಲ್ಲ. ಹೀಗಾಗಿ ಮಂಗಗಳ ಹಾವಳಿಯಿಂದ ನಷ್ಟಕ್ಕೊಳಗಾದ ರೈತರಿಗೆ ಪರಿಹಾರವೂ ಸಿಗುತ್ತಿಲ್ಲ ಎಂದೂ ಹೇಳುತ್ತಾರೆ.
ಮಂಗಗಳ ಹಾವಳಿ ತಡೆಗೆ ಅಸ್ಸಾಂ, ದೆಹಲಿ, ಹಿಮಾಚಲ ಪ್ರದೇಶ ಮಾದರಿಯ ‘ಮಂಕಿ ಪಾರ್ಕ್’ ನಿರ್ಮಾಣ ಮಾಡುವ ಸಂಬಂಧ ಕೊಲ್ಲೂರು ಸಮೀಪದ ಹೊಸನಗರ ತಾಲೂಕಿನ ನಾಗೋಡಿಯಲ್ಲಿ ಪ್ರಾಯೋಗಿಕವಾಗಿ 100 ಎಕರೆ ಪ್ರದೇಶದಲ್ಲಿ ‘ಮಂಕಿ ಪಾರ್ಕ್’ ಸ್ಥಾಪನೆಗೆ 2019ರಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ನಿರ್ಧಾರ ಕೈಗೊಂಡಿತ್ತಾದರೂ ಅನುಷ್ಠಾನಕ್ಕೆ ಬಂದಿಲ್ಲ.
ಸರ್ಕಾರ ಮಂಗಗಳ ಹಾವಳಿ ಯೋಜನೆಯೊಂದನ್ನು ರೂಪಿಸುವುದರ ಜೊತೆಗೆ ಮಂಗಗಳ ಹಾವಳಿಯಿಂದಾದ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಕೃಷಿಕರು ಒತ್ತಾಯಿಸಿದ್ದಾರೆ.
ಮಂಗಗಳಿಂದ ತೊಂದರೆಗಳಾಗುತ್ತಿರುವ ಬಗ್ಗೆ ಯೋಜನಾನಗರ ಮದ್ದೋಡಿ ಯಳಜಿತ ಮುಂತಾದ ಭಾಗಗಳ ಜನರು ಬಂದು ಮೌಖಿಕವಾಗಿ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆಅಜಯ್ ಭಂಡಾರ್ಕರ್ ಮುಖ್ಯಾಧಿಕಾರಿ ಬೈಂದೂರು ಪ.ಪಂ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.