ADVERTISEMENT

ಬೈಂದೂರು: ತಾಲ್ಲೂಕು ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಗಂಟಿಹೊಳೆ ಕ್ಲಾಸ್

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 13:45 IST
Last Updated 1 ಜುಲೈ 2025, 13:45 IST
ಬೈಂದೂರು ತಾಲೂಕು ಕೆಡಿಪಿ ಸಭೆ ಶಾಸಕ ಗುರುರಾಜ ಗಂಟಿಹೊಳೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬೈಂದೂರು ತಾಲೂಕು ಕೆಡಿಪಿ ಸಭೆ ಶಾಸಕ ಗುರುರಾಜ ಗಂಟಿಹೊಳೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.   

ಬೈಂದೂರು: ‘ಆಡಳಿತ ಸೌಧದಲ್ಲಿ ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವವಹಿಸದೆ ಜನರ ಕೆಲಸ ಕಾರ್ಯಗಳನ್ನು ಮಾಡದೆ ದಲ್ಲಾಳಿಗಳಿಂದ ಬರುವ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿನ ಸಿ.ಸಿ.ಟಿ.ವಿ ಕ್ಯಾಮರಾ, ಲಿಫ್ಟ್ ಕಾರ್ಯ ನಿರ್ವಹಿಸುತ್ತಿಲ್ಲ. ಶೌಚಾಲಯ ಶುಚಿಯಾಗಿರದೆ ಗಬ್ಬು ನಾರುತ್ತಿವೆ’ ಎಂದು ಕೆಡಿಪಿ ಸದಸ್ಯ ನರಸಿಂಹ ಹಳಗೇರಿ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ತಾಲ್ಲೂಕು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ಸದಸ್ಯ ಶೇಖರ ಪೂಜಾರಿ ಅವರು ಇಲ್ಲಿನ ತಹಶೀಲ್ದಾರರಿಗೆ ಸಿಬ್ಬಂದಿ ಮೇಲೆ ಹಿಡಿತವಿಲ್ಲ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಗುರುರಾಜ ಗಂಟಿಹೊಳೆ, ‘ತಾಲ್ಲೂಕು ಕಚೇರಿ ಲಂಚದ ಕೇಂದ್ರವಾಗಿ ಮಾರ್ಪಟ್ಟಿದೆ. ಸಿಬ್ಬಂದಿ ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲೆ ಈಗಾಗಲೇ ಹಲವು ಸಭೆ ನಡೆಸಿ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ಆದರೂ ಸುಧಾರಣೆ ಕಂಡಿಲ್ಲ. ಇಲ್ಲಿನ ಸಿಬ್ಬಂದಿಯ ದುರ್ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಆಡಳಿತ ಸೌಧದಲ್ಲಿ ಕೆಡಿಪಿ ಸದಸ್ಯರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

ಕುಂದಾಪುರ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ವೈದ್ಯರು ₹5 ಸಾವಿರ ಲಂಚದ ಬೇಡಿಕೆ ಇಡುತ್ತಿದ್ದಾರೆ. ಇದರಿಂದಾಗಿ ಬಡವರಿಗೆ ಆರೋಗ್ಯ ಸೇವೆ ಪಡೆಯುವುದೇ ಸವಾಲಾಗಿದೆ ಎಂದು ಸದಸ್ಯ ಶೇಖರ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರೇಮಾನಂದ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೈಂದೂರಿನಲ್ಲಿ ಅಗ್ನಿಶಾಮಕ ಠಾಣೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಡಯಾಲಿಸಿಸ್ ಘಟಕದ ಕಟ್ಟಡ ಸೇರಿದಂತೆ ಹಲವು ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆಗೆ ಭಾಗ್ಯ ದೊರೆತಿಲ‌್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಗಂಟಿಹೊಳೆ, ಕಾಮಗಾರಿ ಪೂರ್ಣಗೊಂಡ ಎಲ್ಲಾ ಕಟ್ಟಡಗಳನ್ನು ಶೀಘ್ರ ಉದ್ಘಾಟಿಸಿ ಸಾರ್ವಜನಿಕರಿಗೆ ಉಪಯೋಗಕ್ಕೆ ದೊರಕುವಂತೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮೀಣ ಭಾಗದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕೊರತೆಯಿಂದಾಗಿ ಗುಣಮಟ್ಟದ ವಿದ್ಯುತ್ ಇಲ್ಲದೆ ಕೃಷಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಶಾಸಕ ಸೂಚಿಸಿದರು. ಬೈಂದೂರು ವ್ಯಾಪ್ತಿಯಲ್ಲಿ 27 ಟ್ರಾನ್ಸ್‌ಫಾರ್ಮರ್‌ಗಳಿಗೆ ಬೇಡಿಕೆಯಿದೆ. ಈಗಾಗಲೇ 10 ಅಳವಡಿಸಲಾಗಿದೆ, ಉಳಿದವುಗಳನ್ನು ಹಂತ ಹಂತವಾಗಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಅರಣ್ಯ ಇಲಾಖೆ, ಕೃಷಿ ಇಲಾಖೆ, ಪಶು ಸಂಗೋಪನಾ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಶಾಸಕ ಸೂಚನೆ ನೀಡಿದರು. ಬೆಳೆ ವಿಮೆ, ರಾಷ್ಟ್ರೀಯ ಹೆದ್ದಾರಿ, ತೋಡುಗಳ ಹೂಳೆತ್ತುವಿಕೆ, ಗ್ರಾಮೀಣ ಭಾಗಗಳಿಗೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಗ್ಯಾರಂಟಿ ಮನದಟ್ಟು ಮಾಡಿಸಿ: ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಬೈಂದೂರು ತಾಲ್ಲೂಕಿಗೆ ಇದುವರೆಗೆ ₹197 ಕೋಟಿ ಅಧಿಕ ಅನುದಾನ ಬಂದಿದ್ದು, ಈ ಬಗ್ಗೆ ಅಧಿಕಾರಿಗಳು ಜನರಿಗೆ ಮನದಟ್ಟು ಮಾಡುವ ಕೆಲಸ ಮಾಡಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಶೇಖರ ಪೂಜಾರಿ, ಜಗದೀಶ ದೇವಾಡಿಗ, ಸತೀಶ ಶೆಟ್ಟಿ ಆಗ್ರಹಿಸಿದರು.

ಕೆಡಿಪಿ ಸದಸ್ಯರಾದ ಸತೀಶ ಶೆಟ್ಟಿ, ಜಗದೀಶ ದೇವಾಡಿಗ, ನರಸಿಂಹ ಹಳಗೇರಿ, ಶೇಖರ ಪೂಜಾರಿ, ಗ್ರೀಷ್ಮಾ ಬಿಡೆ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೋಹನ್ ಪೂಜಾರಿ, ತಹಶೀಲ್ದಾರ್‌ ರಾಮಚಂದ್ರಪ್ಪ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರಾಜಕುಮಾರ, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.