ADVERTISEMENT

ಭಾರಿ ಮಳೆ: ಪಂಜರದ ಮೀನುಗಳಿಗೆ ಆಹಾರ ಕ್ಷಾಮ

ನವೀನ್ ಕುಮಾರ್ ಜಿ.
Published 26 ಜುಲೈ 2025, 6:38 IST
Last Updated 26 ಜುಲೈ 2025, 6:38 IST
ಪಂಜರ ಮೀನು ಕೃಷಿ
ಪಂಜರ ಮೀನು ಕೃಷಿ   

ಉಡುಪಿ: ಅತಿಯಾದ ಮಳೆ ಹಾಗೂ ಮೀನಿನ ಲಭ್ಯತೆ ಕೊರತೆಯು ಜಿಲ್ಲೆಯಲ್ಲಿ ಪಂಜರ ಕೃಷಿ ನಡೆಸುವ ಮೀನುಗಾರರ ಮೇಲೆಯೂ ಪರಿಣಾಮ ಬೀರಿದೆ.

ಜಿಲ್ಲೆಯ ಉಡುಪಿ ಹಾಗೂ ಕುಂದಾಪುರ ತಾಲ್ಲೂಕು ವ್ಯಾಪ್ತಿಗಳಲ್ಲಿ ಪಂಜರ ಮೀನು ಕೃಷಿ ನಡೆಸುವ ಹಲವಾರು ಮೀನುಗಾರರಿದ್ದಾರೆ. ತೀವ್ರ ಮತ್ಯ ಕ್ಷಾಮದ ನಡುವೆ ಈ ಭಾಗದ ಕೆಲವು ಮೀನುಗಾರರು ಇದನ್ನು ಉಪಕಸುಬಾಗಿ ಮಾಡುತ್ತಿದ್ದಾರೆ.

ಈ ಬಾರಿ ಮೇ ತಿಂಗಳಿನಿಂದಲೇ ವಿಪರೀತ ಮಳೆ ಬಂದ ಕಾರಣ ದೋಣಿಗಳು ಕಡಲಿಗಿಳಿಯದೆ ಮೀನಿನ ಲಭ್ಯತೆ ಕಡಿಮೆಯಾಗಿದೆ. ಇದರಿಂದ ಪಂಜರದ ಒಳಗೆ ಸಾಕುವ ಮೀನುಗಳಿಗೂ ಆಹಾರ ಕೊರತೆ ಎದುರಾಗಿದೆ.

ADVERTISEMENT

ಪಂಜರ ಕೃಷಿಯ ಮೂಲಕ ಸಾಕುವ ಮೀನುಗಳಿಗೆ ಸ್ಥಳೀಯವಾಗಿ ಸಿಗುವ ಬೂತಾಯಿ, ಹೊಳೆ ಮೀನುಗಳನ್ನು ಆಹಾರವಾಗಿ ನೀಡಲಾಗುತ್ತಿದೆ. ಹೆಚ್ಚಾಗಿ ಮೀನಿನ ತ್ಯಾಜ್ಯವನ್ನು ಕೂಡ ಪಂಜರದ ಮೀನುಗಳಿಗೆ ನೀಡಲಾಗುತ್ತಿದೆ. ಇದರಿಂದ ಈ ಮೀನುಗಳು ಸದೃಢವಾಗಿ ಬೆಳೆಯುತ್ತವೆ.

ಸಾಮಾನ್ಯವಾಗಿ ಉಡುಪಿ, ಕುಂದಾಪುರ ವ್ಯಾಪ್ತಿಯಲ್ಲಿ ಅಳಿವೆಗಳಲ್ಲಿ ಪಂಜರದೊಳಗೆ ಕೆಂಬೇರಿ (ರೆಡ್‌ ಸ್ನ್ಯಾಪರ್) ಮತ್ತು ಸೀ ಬಾಸ್ ಮೀನುಗಳನ್ನು ಸಾಕಲಾಗುತ್ತಿದೆ. ಉ‍ಪ್ಪು ನೀರಿನಲ್ಲಿ ಸಾಕುವ ಈ ಮೀನುಗಳು ಸಿದ್ಧ ಆಹಾರಗಳನ್ನು (ಪೆಲೆಟೆಡ್ ಫುಡ್‌) ತಿನ್ನುವುದಿಲ್ಲ. ಅಲ್ಲದೆ ಸಿದ್ಧ ಆಹಾರವನ್ನೇ ನೀಡಿ ಪಂಜರದಲ್ಲಿ ಮೀನು ಸಾಕಣೆ ನಡೆಸುವುದು ಅತ್ಯಂತ ದುಬಾರಿ ಎನ್ನುತ್ತಾರೆ ಮೀನುಗಾರರು.

ಪಂಜರ ಕೃಷಿ ನಡೆಸುವ ಮೀನುಗಾರರು ಹೆಚ್ಚಾಗಿ ಮೀನುಗಾರಿಕಾ ವೃತ್ತಿಯವರು ಆಗಿರುವುದರಿಂದ ಹೊಳೆ, ಸಮುದ್ರಗಳಲ್ಲಿ ಸಿಗುವ ಸಣ್ಣ ಮೀನುಗಳನ್ನು ಪಂಜರದ ಮೀನುಗಳಿಗೆ ಆಹಾರವಾಗಿ ನೀಡುತ್ತಾರೆ. ಇದರಿಂದ ಅವರಿಗೆ ಹೆಚ್ಚಿನ ಹೊರೆ ಬೀಳುವುದಿಲ್ಲ. ಆದರೆ ಮಳೆ, ಚಂಡಮಾರುತಗಳ ಸಂದರ್ಭದಲ್ಲಿ ಮೀನುಗಾರಿಕೆಗೆ ತೆರಳಲಾಗದೆ ಸಮಸ್ಯೆ ಉಂಟಾಗುತ್ತಿದೆ ಎಂದು ಹೇಳುತ್ತಾರೆ.

ಈಗ ಟ್ರಾಲಿಂಗ್‌ ನಿಷೇಧ ಇರುವುದರಿಂದ ದೊಡ್ಡ ದೋಣಿಗಳು ಸಮುದ್ರಕ್ಕೆ ತೆರಳುವುದಿಲ್ಲ. ನಾಡ ದೋಣಿಗಳಿಗೆ ಮೀನುಗಾರಿಕೆ ನಡೆಸಬಹುದಾದರೂ ಹವಾಮಾನ ವೈಪರೀತ್ಯದಿಂದ ಅವುಗಳು ಕೂಡ ಕಡಲಿಗಿಳಿಯುವುದಿಲ್ಲ. ಇದರಿಂದ ಪಂಜರದ ಮೀನುಗಳಿಗೆ ತೀವ್ರ ಆಹಾರ ಕ್ಷಾಮ ತಲೆದೋರಿದೆ. ಈ ಕಾರಣಕ್ಕೆ ಪ್ಯಾಕೆಟ್ ಮೀನುಗಳನ್ನು ತಂದು ಹಾಕುವಂತಹ ಅನಿವಾರ್ಯತೆ ಒದಗಿದೆ ಎನ್ನುತ್ತಾರೆ ಮೀನು ಸಾಕಣೆದಾರಾರು.

ಪಂಜರದ ಮೀನುಗಳಿಗೆ ಸಮರ್ಪಕವಾಗಿ ಆಹಾರ ಒದಗಿಸದಿದ್ದರೆ ಅವುಗಳ ಬೆಳವಣಿಗೆ ಕುಂಠಿತವಾಗಿ ನಷ್ಟ ಉಂಟಾಗುತ್ತದೆ. ಸಾಮಾನ್ಯವಾಗಿ ಮರಿ ಬಿತ್ತನೆ ಮಾಡಿ ಒಂದು ವರ್ಷದಲ್ಲಿ ಪಂಜರದ ಮೀನುಗಳು ಮಾರಾಟಕ್ಕೆ ಬರುತ್ತವೆ. ಆದರೆ ಮಳೆಗಾಲದ ಅವಧಿಯಲ್ಲಿ ಆಹಾರ ಕೊರತೆಯಿಂದಾಗಿ ನಾವು ಸಾಕುವ ಮೀನುಗಳು ಮಾರಾಟಕ್ಕೆ ಬರಲು 18 ತಿಂಗಳುಗಳು ಬೇಕಾಗುತ್ತವೆ ಎನ್ನುತ್ತಾರೆ ಬೈಂದೂರಿನ ಮೀನು ಸಾಕಣೆದಾರ ಬಾಬು.

‘ಕೊಚ್ಚಿ ಹೋಗುತ್ತಿವೆ ಪಂಜರ

’ ಅಳಿವೆ ಪ್ರದೇಶದಲ್ಲಿ ಕೆಂಬೇರಿ ಮತ್ತು ಸೀಬಾಸ್ ಮೀನಿನ ಮರಿಗಳನ್ನು ಪಂಜರದೊಳಗೆ ಬಿಟ್ಟು ಅವುಗಳಿಗೆ ಆಹಾರ ನೀಡಿ ಬೆಳೆಸಲಾಗುತ್ತದೆ. ಆದರೆ ವಿಪರೀತ ಮಳೆ ಬಂದರೆ ಮತ್ತು ಅಳಿವೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾದರೆ ನಾವು ನಿರ್ಮಿಸಿದ ಪಂಜರಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಸಮುದ್ರ ಸೇರಿ ನಷ್ಟ ಉಂಟಾಗುತ್ತಿದೆ. ಪ್ರತಿ ವರ್ಷವೂ ನೀರಿನ ಕೆಲಸಕ್ಕೆ ಸಿಲುಕಿ ಕೆಲವು ಪಂಜರಗಳು ಕೊಚ್ಚಿಕೊಂಡು ಹೋಗಿ ನಷ್ಟ ಉಂಟಾಗುತ್ತಿದೆ ಎಂದು ಪಂಜರ ಮೀನು ಕೃಷಿಕ ಬಾಬು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.