ADVERTISEMENT

ಶಿಕ್ಷಣಕ್ಕೆ ಪ್ರೋತ್ಸಾಹ; ಶೈಕ್ಷಣಿಕ ಸಾಲ: ಬಿಜುವಾಸುದೇವನ್‌

ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆ ಪ್ರಚಾರ ಅಭಿಯಾನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 2:39 IST
Last Updated 27 ನವೆಂಬರ್ 2022, 2:39 IST
ಹೆಬ್ರಿ ಸಮೀಪದ ಮುದ್ರಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಬಿಜುವಾಸುದೇವನ್‌ ಅವರನ್ನು ಸನ್ಮಾನಿಸಲಾಯಿತು
ಹೆಬ್ರಿ ಸಮೀಪದ ಮುದ್ರಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಬಿಜುವಾಸುದೇವನ್‌ ಅವರನ್ನು ಸನ್ಮಾನಿಸಲಾಯಿತು   

ಹೆಬ್ರಿ: ‘ಸಾಮಾಜಿಕ ಭದ್ರತಾ ಯೋಜನೆಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಕಾರ್ಯಕ್ರಮ ಪ್ರಚಾರ ಅಭಿಯಾನ ನಡೆಯುತ್ತಿದ್ದು, ಆ ಮೂಲಕ ಹಳ್ಳಿಯ ಜನತೆಗೆ ಸರ್ಕಾರದ ಸವಲತ್ತುಗಳು ಮತ್ತು ಬ್ಯಾಂಕ್‌ ಸೇವೆಯನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಯೂನಿಯನ್‌ ಬ್ಯಾಂಕ್‌ ಜನಸಾಮಾನ್ಯರ ಬ್ಯಾಂಕ್‌ ಆಗಿದ್ದು, ಎಲ್ಲರಿಗೂ ಅತ್ಯುತ್ತಮ ಸವಲತ್ತು, ನಗುಮುಖದ ಸೇವೆ ನೀಡುತ್ತಿದೆ. ಎಲ್ಲರೂ ಸೇರಿ ಯೂನಿಯನ್‌ ಬ್ಯಾಂಕ್‌ ಅನ್ನು ಇನ್ನಷ್ಟು ಬೆಳೆಸಬೇಕಿದೆ’ ಎಂದು ಯೂನಿಯನ್‌ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಬಿಜುವಾಸುದೇವನ್‌ ಹೇಳಿದರು.

ಕೇಂದ್ರ ಸರ್ಕಾರದ ಆರ್ಥಿಕ ಸೇರ್ಪಡೆ ಕಾರ್ಯಕ್ರಮದ ಸಾಮಾಜಿಕ ಭದ್ರತಾ ಯೋಜನೆಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಕಾರ್ಯಕ್ರಮ ಪ್ರಚಾರ ಅಭಿಯಾನವನ್ನು ಮುದ್ರಾಡಿ ಯೂನಿಯನ್ ಬ್ಯಾಂಕಿನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಯೂನಿಯನ್‌ ಬ್ಯಾಂಕ್‌ ಉಪ ಮಹಾಪ್ರಬಂಧಕ ಡಾ.ಎಚ್.ಟಿ.ವಾಸಪ್ಪ ಮಾತನಾಡಿ, ‘ಯೂನಿಯನ್‌ ಬ್ಯಾಂಕ್‌ ಅತ್ಯುತ್ತಮ ಸೇವೆ ನೀಡುತ್ತಿದೆ. ಯಾರೂ ಕೂಡ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು. ಯೂನಿಯನ್‌ ಬ್ಯಾಂಕಿನಲ್ಲಿ ಶೈಕ್ಷಣಿಕ ಸಾಲ ಪಡೆದು ಅತ್ಯುನ್ನತ ಸ್ಥಾನಗಳನ್ನು ಪಡೆಯಬೇಕು. ದೇಶದಲ್ಲಿ ಅತಿ ಹೆಚ್ಚು ಮಂದಿಗೆ ಶಿಕ್ಷಣ ಸಾಲವನ್ನು ನೀಡಿದ ಖ್ಯಾತಿ ಯೂನಿಯನ್‌ ಬ್ಯಾಂಕ್‌ಗೆ ಇದೆ. ಮಕ್ಕಳ ಬ್ಯಾಂಕ್‌ ಖಾತೆಯನ್ನು ಯೂನಿಯನ್‌ ಬ್ಯಾಂಕಿನಲ್ಲಿ ತೆರೆಯಿರಿ’ ಎಂದು ಮನವಿ ಮಾಡಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿ, ‘ಮುದ್ರಾಡಿ ಪರಿಸರದ ಸಾವಿರಾರು ಜನರಿಗೆ ಬ್ಯಾಂಕ್ ಬದುಕು ಕಟ್ಟಿಕೊಟ್ಟಿದೆ. ಅಂದಿನ ಕಾರ್ಪೊರೇಷನ್‌ ಬ್ಯಾಂಕ್ ನಮಗೆ ತಾಯಿ ಇದ್ದಂತೆ. ಮುಂದೆಯೂ ಯೂನಿಯನ್‌ ಬ್ಯಾಂಕ್‌ ಮೂಲಕ ಜನಸೇವೆ ದೊರೆಯಲಿ’ ಎಂದರು.

ಬಿಜುವಾಸುದೇವನ್‌ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಸಾಹಿತಿಯಾಗಿರುವ ಬ್ಯಾಂಕ್ ಗ್ರಾಹಕ ಅಂಬಾತನಯ ಮುದ್ರಾಡಿ ಅವರನ್ನು ಗೌರವಿಸಲಾಯಿತು. ಯೂನಿಯನ್‌ ಬ್ಯಾಂಕ್‌ ಡಿಜಿಎಂ ಅಣ್ಣಾದೊರೈ, ಕೆ.ಸ್ವಾಮಿನಾಥನ್‌, ಮುದ್ರಾಡಿ ಶಾಖೆಯ ವ್ಯವಸ್ಥಾಪಕ ಪುರುಷೋತ್ತಮ್ ಇದ್ದರು. ಅಜೆಕಾರು ಶಾಖೆಯ ದೇವಪ್ಪ ನಾಯ್ಕ್‌ ನಿರೂಪಿಸಿದರು. ಮಂಜುನಾಥ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.