ADVERTISEMENT

ಏರುಗತಿಯಲ್ಲಿ ಕೋಳಿ ಮಾಂಸ ದರ

ಭಾರಿ ಮಳೆಗೆ ಕುಕ್ಕುಟೋದ್ಯಮಕ್ಕೆ ಪೆಟ್ಟು, ಮಾಂಸ ಉತ್ಪಾದನೆ ಕುಸಿತ

ಬಾಲಚಂದ್ರ ಎಚ್.
Published 8 ಸೆಪ್ಟೆಂಬರ್ 2022, 14:34 IST
Last Updated 8 ಸೆಪ್ಟೆಂಬರ್ 2022, 14:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ರಾಜ್ಯದಾದ್ಯಂತ ಸುರಿದ ಭಾರಿ ಮಳೆ ಹಾಗೂ ಕುಕ್ಕುಟೋದ್ಯಮದಲ್ಲಿ ಬಳಸುವ ಕಚ್ಛಾ ವಸ್ತುಗಳ ದರ ಏರಿಕೆಯ ಪರಿಣಾಮ ಕೋಳಿ ಮಾಂಸದ ಬೆಲೆ ಹೆಚ್ಚಾಗುತ್ತಿದೆ. ತಿಂಗಳ ಹಿಂದೆ ತೀವ್ರ ಕುಸಿತ ಕಂಡಿದ್ದ ಚಿಕನ್‌ ದರ ಏರುಮುಖವಾಗಿ ಸಾಗುತ್ತಿರುವುದು ಮಾಂಸಾಹಾರಿಗಳಿಗೆ ಬೇಸರ ತರಿಸಿದೆ.

ಆಗಸ್ಟ್‌ನಲ್ಲಿ ಜೀವದ ಕೋಳಿ ಕೆಜಿಗೆ ₹ 100 ದರ ಇತ್ತು. ಸದ್ಯ ₹ 140ಕ್ಕೆ ಹೆಚ್ಚಾಗಿದೆ. ಚಿಕನ್‌ (ವಿತ್ ಸ್ಕಿನ್) ಕೆಜಿಗೆ ₹ 150 ದರ ಇತ್ತು. ಪ್ರಸ್ತುತ ₹ 200ಕ್ಕೆ ಮುಟ್ಟಿದೆ. ಹಾಗೆಯೇ ಸ್ಕಿನ್‌ಲೆಸ್‌ ಕೆ.ಜಿಗೆ ₹ 170 ದರ ಇತ್ತು. ಸದ್ಯ ₹ 220 ತಲುಪಿದೆ. ಊರಿನ ಕೋಳಿಯ ದರವೂ ₹ 300 ರಿಂದ ₹ 320ಕ್ಕೆ ಹೆಚ್ಚಾಗಿದ್ದು ದರ ಅಲ್ಪ ಏರಿಕೆಯಾಗಿದೆ.

ದರ ಏರಿಕೆಗೆ ಕಾರಣ ಏನು:

ADVERTISEMENT

ಮಳೆಗಾಲದಲ್ಲಿ ಕೋಳಿ ಮಾಂಸಕ್ಕೆ ಸಹಜವಾಗಿ ಬೇಡಿಕೆ ಹೆಚ್ಚಾಗಿ ದರವೂ ಹೆಚ್ಚುತ್ತದೆ. ಜತೆಗೆ, ಬಯಲು ಸೀಮೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕುಕ್ಕುಟೋದ್ಯಮಕ್ಕೆ ಆರ್ಥಿಕ ಹೊಡೆತ ಬಿದ್ದಿದೆ. ಕೋಳಿ ಸಾಕಣೆ ಫಾರ್ಮ್‌ಗಳಿಗೆ ಮಳೆಯ ನೀರು ನುಗ್ಗಿ ಲಕ್ಷಾಂತರ ಕೋಳಿಗಳು ಸಾವನ್ನಪ್ಪಿವೆ.

ನಿರಂತರ ಮಳೆ ಸುರಿಯುತ್ತಲೇ ಇರುವುದರಿಂದ ತೇವಾಂಶದ ಕಾರಣಕ್ಕೆ ಕೋಳಿ ಮಾಂಸ ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎನ್ನುತ್ತಾರೆ ಫಾರಂ ಮಾಲೀಕರು.

ಮಳೆ ಹೊಡೆತದ ಜತೆಗೆ ಕೋಳಿಗಳಿಗೆ ಬಳಸುವ ಆಹಾರ ಪದಾರ್ಥಗಳ ದರವೂ ಏರಿಕೆಯಾಗಿರುವುದು ಹೊರೆಯಾಗಿದೆ. ಫಾರಂಗಳ ನಿರ್ವಹಣೆ, ಉಷ್ಠಾಂಶ ಕಾಪಾಡಿಕೊಳ್ಳಲು ಹೆಚ್ಚು ವಿದ್ಯುತ್ ಬಳಕೆ, ನಿರ್ವಹಣಾ ವೆಚ್ಚ, ಮಳೆಯಿಂದ ಕೋಳಿಗಳ ಸಾವಿನಿಂದಾಗಿ ದರ ಏರಿಕೆ ಅನಿವಾರ್ಯವಾಗಿದೆ ಎನ್ನುತ್ತಾರೆ ಮಾಲೀಕರು.

ಕರಾವಳಿಯಲ್ಲಿ ಮೀನು ಹೊರತುಪಡಿಸಿದರೆ ಕೋಳಿ ಮಾಂಸವನ್ನು ಪ್ರಮುಖ ಆಹಾರವಾಗಿ ಬಳಸಲಾಗುತ್ತದೆ. ಪ್ರವಾಸೋದ್ಯಮ ಕೇಂದ್ರೀತ ಜಿಲ್ಲೆಯಾಗಿರುವ ಕಾರಣ ಉಡುಪಿಯಲ್ಲಿ ಮಾಂಸಾಹಾರ ಹೋಟೆಲ್‌ಗಳ ಸಂಖ್ಯೆ ಹೆಚ್ಚಾಗಿದ್ದು, ಪ್ರತಿನಿತ್ಯ ಸಾವಿರಾರು ಕೆ.ಜಿ ಕೋಳಿ ಮಾಂಸ ಖರ್ಚಾಗುತ್ತದೆ. ಚಿಕನ್ ದರ ಏರಿಕೆಯ ಬಿಸಿ ಜನ ಸಾಮಾನ್ಯರ ಜತೆಗೆ ಹೋಟೆಲ್ ಮಾಲೀಕರಿಗೂ ತಟ್ಟುತ್ತಿದೆ.

ದುಪ್ಪಟ್ಟಾಗಿದ್ದ ದರ:

ಮಾರ್ಚ್‌ನಲ್ಲಿ ಚಿಕನ್ ದರದಲ್ಲಿ ಭಾರಿ ಏರಿಕೆಯಾಗಿತ್ತು. ಜೀವದ ಕೋಳಿ ದರ ಕೆ.ಜಿಗೆ ₹ 220ಕ್ಕೆ ಮುಟ್ಟಿದರೆ, ವಿತ್ ಸ್ಕಿನ್‌ ಕೆ.ಜಿಗೆ ₹ 260, ಸ್ಕಿನ್‌ ಲೆಸ್‌ 300 ಗಡಿ ಮುಟ್ಟಿತ್ತು. ಬಳಿಕ ಜುಲೈನಲ್ಲಿ ದರ ಇಳಿಕೆಯಾಗಿ ಜೀವದ ಕೋಳಿ ದರ ಕೆ.ಜಿಗೆ 100ಕ್ಕೆ ಇಳಿಕೆಯಾಗಿ, ವಿತ್ ಸ್ಕಿನ್‌ ₹ 140, ಸ್ಕಿನ್ ಲೆಸ್‌ ₹ 160ಕ್ಕೆ ಕುಸಿದಿತ್ತು.

ಈಗ ಮತ್ತೆ ದರ ಏರುಗತಿಯಲ್ಲಿ ಸಾಗುತ್ತಿದ್ದು 15 ದಿನಗಳಲ್ಲಿ ಕೆ.ಜಿಗೆ ಕೋಳಿ ಮಾಂಸಕ್ಕೆ ₹ 60 ಹೆಚ್ಚಾಗಿದೆ ಎನ್ನುತ್ತಾರೆ ಗ್ರಾಹಕರು. ಚಿಕನ್ ದರ ಕಡಿಮೆಯಗುವ ಲಕ್ಷಣಗಳು ಕಾಣುತ್ತಿಲ್ಲ, ಬದಲಾಗಿ ಮತ್ತಷ್ಟು ಹೆಚ್ಚಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.