ADVERTISEMENT

ಉಡುಪಿ ಮಕ್ಕಳ ಸ್ನೇಹಿ ಜಿಲ್ಲೆಯಾಗಲಿ

ಮಕ್ಕಳ ದಿನಾಚರಣೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ದಿನಕರ ಬಾಬು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 15:36 IST
Last Updated 14 ನವೆಂಬರ್ 2019, 15:36 IST
ಒಳಕಾಡು ಸರ್ಕಾರಿ ಶಾಲೆಯಲ್ಲಿ ಗುರುವಾರ ನಡೆದ ಚೈಲ್ಡ್‌ಲೈನ್‌ ದೋಸ್ತಿ ಕಾರ್ನರ್‌ನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ನಿಂತು ಫೋಟೊ ಕ್ಲಿಕ್ಕಿಸಿಕೊಂಡರು
ಒಳಕಾಡು ಸರ್ಕಾರಿ ಶಾಲೆಯಲ್ಲಿ ಗುರುವಾರ ನಡೆದ ಚೈಲ್ಡ್‌ಲೈನ್‌ ದೋಸ್ತಿ ಕಾರ್ನರ್‌ನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ನಿಂತು ಫೋಟೊ ಕ್ಲಿಕ್ಕಿಸಿಕೊಂಡರು   

ಉಡುಪಿ: ಜಿಲ್ಲೆಯಲ್ಲಿ ಮಕ್ಕಳ ಸ್ನೇಹಿ ವಾತಾವರಣ ನಿರ್ಮಾಣವಾಗಲು ಜಿಲ್ಲಾಡಳಿತದ ಜತೆ ಸ್ವಯಂ ಸೇವಾ ಸಂಘಟನೆಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದರು.

ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾನೂನು ಸೇವೆಗಳ ಪ್ರಾಧಿಕಾರ, ರೋಟರಿ, ಚೈಲ್ಡ್ ಹೆಲ್ಪ್‌ಲೈನ್ ಸಹಯೋಗದಲ್ಲಿ ಒಳಕಾಡು ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಮತ್ತು ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ‘ಇಂದಿನ ಮಕ್ಕಳು ಮುಂದಿನ ಭಾರತದ ರೂವಾರಿಗಳು. ಭಾರತ ಸದೃಢವಾಗಬೇಕಾದರೆ ಮಕ್ಕಳು ಸದೃಢರಾಗಬೇಕು ಎಂದರು.

ADVERTISEMENT

ಮಕ್ಕಳಿಗೆ ಶಿಸ್ತು ಕಲಿಕೆಯ ಜತೆಗೆ, ಅವರ ಭಾವನೆಗಳನ್ನು ಅರಿತು ಸ್ಪಂದಿಸಬೇಕು. ಶಿಸ್ತಿನ ಹೆಸರಲ್ಲಿ ಮಕ್ಕಳನ್ನು ನಾಲ್ಕುಗೋಡೆಗಳ ಮಧ್ಯೆ ಕೂಡಿ ಹಾಕಬೇಡಿ. ಶಿಕ್ಷಣ ಪಠ್ಯದ ಜತೆಗೆ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರಬೇಕು. ಮಕ್ಕಳಲ್ಲಿರುವ ಕ್ರೀಡೆ ಮತ್ತು ಸಾಂಸ್ಕೃತಿಕ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಾವೇರಿ ಮಾತನಾಡಿ, ಮಕ್ಕಳು ಸಮಸ್ಯೆಗೆ ಒಳಗಾದರೆ ಸಹಾಯವಾಣಿ ಕೇಂದ್ರ 1098ಗೆ ಕರೆ ಮಾಡಿ ನೆರವು ಪಡೆಯಬೇಕು ಎಂದು ತಿಳಿಸಿದರು.

ನಂತರ ನಡೆದಸಂವಾದದಲ್ಲಿ ವಿದ್ಯಾರ್ಥಿನಿ ರಕ್ಷಿತಾ ಮಾತನಾಡಿ, ಆ್ಯಪ್‌ಗಳು ಕಲಿಕೆಗೆ ಹೆಚ್ಚು ಸಹಕಾರಿಯಾಗಿದೆ. ಗ್ರಾಮೀಣ ಭಾಗದ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ಸ್ಥಗಿತಗೊಂಡಿದ್ದು, ಮತ್ತೆ ಆರಂಭಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದಳು.

ಸರ್ಕಾರಿ ಶಾಲೆಗಳಲ್ಲಿ ಆ್ಯಪ್‌ಗಳ ಮೂಲಕ ಭೋದನಾ ವಿಧಾನ ಜಾರಿ ಕುರಿತು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕು. ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ನೀಡುವ ಕುರಿತು ಶಿಕ್ಷಣ ಇಲಾಖೆಗೆ ಅಹವಾಲು ಸಲ್ಲಿಸಲಾಗುವುದು ಎಂದರು.

ಒಳಕಾಡು ಶಾಲೆಯಲ್ಲಿ 700 ವಿದ್ಯಾರ್ಥಿಗಳಿಗೆ ಒಬ್ಬರೇ ದೈಹಿಕ ಶಿಕ್ಷಕರಿದ್ದಾರೆ ಎಂಬ ರಕ್ಷಿತಾ ಪ್ರಶ್ನೆಗೆ, ದೈಹಿಕ ಶಿಕ್ಷಕರ ನೇಮಕಕ್ಕೆ ಕ್ರಮ ವಹಿಸಲಾಗುವುದು ಎಂದು ಡಿಸಿ ಭರವಸೆ ನೀಡಿದರು.

ತೊಂದರೆಗೊಳಗಾದ ಮಕ್ಕಳು 1098ಗೆ ಕರೆ ಮಾಡಲು ಎಲ್ಲ ಸಂದರ್ಭದಲ್ಲಿ ಸಾಧ್ಯವಾಗದ ಕಾರಣ, ಖುದ್ದು ತೆರಳಿ ಸಮಸ್ಯೆ ತಿಳಿಸಲು ಅನುಕೂಲವಾಗುವಂತೆ ಕೇಂದ್ರ ತೆರೆಯಿರಿ ಎಂಬ ದಿವ್ಯಶ್ರೀ ಪ್ರಶ್ನೆಗೆ ಉತ್ತರಿಸಿದ ಎಸ್‌ಪಿ ನಿಶಾ ಜೇಮ್ಸ್, ‘ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮಕ್ಕಳ ಸಮಸ್ಯೆ ಆಲಿಸಲು ಅಧಿಕಾರಿ ಮತ್ತು ಮಹಿಳಾ ಸಿಬ್ಬಂದಿ ಇದ್ದಾರೆ. ಅವರಿಗೆ ಸಮಸ್ಯೆ ತಿಳಿಸಬಹುದು ಎಂದರು. ಬಾಲ್ಯ ವಿವಾಹ ನಿಷೇಧ ಕುರಿತು ಭಿತ್ತಿಪತ್ರವನ್ನು ಎಸ್‌ಪಿ ನಿಶಾ ಜೇಮ್ಸ್ ಬಿಡುಗಡೆಗೊಳಿಸಿದರು. ಮಕ್ಕಳ ರಕ್ಷಣೆ ಕುರಿತು ರಕ್ಷಾಬಂಧನ ಕಟ್ಟಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಪ್ರೀತಿ ಗೆಹ್ಲೋಟ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಜಿಲ್ಲಾ ಕಾರ್ಮಿಕ ಅಧಿಕಾರಿ ಬಾಲಕೃಷ್ಣ , ಶಿಕ್ಷಣ ಇಲಾಖೆಯ ಜಾಹ್ನವಿ, ಬಾಲಕಲ್ಯಾಣ ಸಮಿತಿ ಅಧ್ಯಕ್ಷ ರೋನಾಲ್ಡ್ ಬಿ.ಪುರ್ಟಾಡೋ, ಬಿ.ಕೆ.ನಾರಾಯಣ ಉಪಸ್ಥಿತರಿದ್ದರು.

ಉಡುಪಿ ರೋಟರಿ ಅಧ್ಯಕ್ಷ ಜನಾರ್ಧನ ಭಟ್ ಸ್ವಾಗತಿಸಿದರು. ಚೈಲ್ಡ್ ಹೆಲ್ಪ್ ಲೈನ್‌ನ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ ಪ್ರಾಸ್ತಾವಿಕ ಮಾತನಾಡಿದರು. ಒಳಕಾಡು ಶಾಲೆಯ ಮುಖ್ಯೋಪಧ್ಯಾಯಿನಿ ನಿರ್ಮಲಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.