ADVERTISEMENT

‘ಸಂತೋಷ ಹಂಚಿ ಬಾಳುವುದೇ ಕ್ರಿಸ್ಮಸ್’

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2024, 6:46 IST
Last Updated 22 ಡಿಸೆಂಬರ್ 2024, 6:46 IST
ಮಲ್ಪೆ ಸಿಎಸ್‌ಐ ಚರ್ಚ್‌ನಲ್ಲಿ ಶುಕ್ರವಾರ  ಕ್ರಿಸ್ಮಸ್ ಸಂಭ್ರಮ ಕಾರ್ಯಕ್ರಮ ಜರುಗಿತು
ಮಲ್ಪೆ ಸಿಎಸ್‌ಐ ಚರ್ಚ್‌ನಲ್ಲಿ ಶುಕ್ರವಾರ  ಕ್ರಿಸ್ಮಸ್ ಸಂಭ್ರಮ ಕಾರ್ಯಕ್ರಮ ಜರುಗಿತು   

ಉಡುಪಿ: ಪರಸ್ಪರ ಸಂತೋಷವನ್ನು ಹಂಚಿ ಬಾಳುವುದೇ ಕ್ರಿಸ್ಮಸ್ ಹಬ್ಬದ ನಿಜವಾದ ಅರ್ಥವಾಗಿದೆ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚ್‌ನ ಧರ್ಮಗುರು ಡೆನಿಸ್ ಡೆಸಾ ಹೇಳಿದರು.

ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ಇದರ ಆಶ್ರಯದಲ್ಲಿ ಮಲ್ಪೆ ಸಿಎಸ್‌ಐ ಚರ್ಚ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರಿಸ್ಮಸ್ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಪರಸ್ಪರ ಶುಭಾಶಯ, ಸಿಹಿತಿಂಡಿಗಳನ್ನು ಹಂಚಿಕೊಂಡರೆ ಸಾಲದು, ಸಹಬಾಳ್ವೆಯ ಜೀವನವನ್ನು ಬಾಳುವುದರೊಂದಿಗೆ ಅದನ್ನು ಪ್ರತಿಯೊಬ್ಬರು ಜೀವನದಲ್ಲಿ ಅನುಕರಣೆ ಮಾಡಿದಾಗ ಮಾತ್ರ ಹಬ್ಬದ ಆಚರಣೆ ಸಾರ್ಥಕತೆ ಪಡೆಯುತ್ತದೆ ಎಂದರು.

ADVERTISEMENT

ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ಅಧ್ಯಕ್ಷ ರಮೇಶ್ ತಿಂಗಳಾಯ ಮಾತನಾಡಿ, ಎಲ್ಲ ಧರ್ಮಗಳ ಆಚರಣೆಯಲ್ಲಿ ಸಾಮ್ಯತೆಗಳಿವೆ. ನಮ್ಮ ನೆರೆಯವರನ್ನು ಗೌರವಿಸಿ ನಡೆದಾಗ ಸೌಹಾರ್ದ ಸಮಾಜ ನಿರ್ಮಾಣಗೊಳ್ಳುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮಲ್ಪೆ ನೆರ್ಗಿಯ ಕೃಷ್ಣಪ್ಪ ಹಾಗೂ ಯಶೋದಾ ದಂಪತಿ ಪುತ್ರಿ ಶ್ರುತಿ ಅವರಿಗೆ ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ವತಿಯಿಂದ ₹25 ಸಾವಿರ ಧನಸಹಾಯ ಹಸ್ತಾಂತರಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಿಎಸ್ಐ, ಯುಬಿಎಂ ಚರ್ಚ್ ಮಲ್ಪೆ, ತೊಟ್ಟಂ ಸಂತ ಅನ್ನಮ್ಮ ಚರ್ಚ್‌ನ ವತಿಯಿಂದ ಕ್ರಿಸ್ಮಸ್ ಸಂಬಂಧಿತ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗಿದವು.

ವೇದಿಕೆಯಲ್ಲಿ ಯುಬಿಎಂ ಚರ್ಚ್ ಮಲ್ಪೆ ಸಭಾ ಪಾಲಕರಾದ ಪಾಸ್ಟರ್ ಕುಮಾರ್ ಸಾಲಿನ್ಸ್, ಸಮಿತಿಯ ಪದಾಧಿಕಾರಿಗಳಾದ ವನಿತಾ ಫೆರ್ನಾಂಡಿಸ್, ಶಬೀರ್, ಸೀರಾಝ್, ತೊಟ್ಟಂ ಸಂತ ಅನ್ನಮ್ಮ ಚರ್ಚ್‌ನ ಪಾಲನ ಮಂಡಳಿ ಉಪಾಧ್ಯಕ್ಷ ಸುನೀಲ್ ಫೆರ್ನಾಂಡಿಸ್ ಇದ್ದರು.

ಸಿಎಸ್ಐ ಚರ್ಚ್ ಮಲ್ಪೆ ಸಭಾಪಾಲಕ ಪಾಸ್ಟರ್ ಎಡ್ವಿನ್ ಜೋಸೆಫ್ ಸ್ವಾಗತಿಸಿದರು. ಗಾಡ್ವಿನ್ ವಂದಿಸಿದರು. ಗ್ಲೋರಿಯಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.