ಪ್ರತಿಭಟನೆಯಲ್ಲಿ ಸಾಮಾಜಿಕ ಚಿಂತಕ ಗಣನಾಥ ಎಕ್ಕಾರ್ ಮಾತನಾಡಿದರು
ಉಡುಪಿ: ಛತ್ತೀಸಗಢದಲ್ಲಿ ಕ್ರೈಸ್ತ ಸನ್ಯಾಸಿನಿಯರ ಮೇಲೆ ಸುಳ್ಳು ಆರೋಪ ಹೊರಿಸಿ ಬಂಧಿಸಿರುವ ಹಾಗೂ ದೌರ್ಜನ್ಯ ನಡೆಸಿರುವುದನ್ನು ಖಂಡಿಸಿ ಕಥೊಲಿಕ್ ಸಭಾ ಉಡುಪಿ ಪ್ರದೇಶದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನಗರದ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಸಾಮಾಜಿಕ ಚಿಂತಕ ಗಣನಾಥ ಎಕ್ಕಾರ್ ಮಾತನಾಡಿ, ‘ದೇಶದಾದ್ಯಂತ 30 ಸಾವಿರಕ್ಕೂ ಅಧಿಕ ಕ್ರೈಸ್ತ ಶಿಕ್ಷಣ ಸಂಸ್ಥೆಗಳಿದ್ದು 50 ಲಕ್ಷ ಮಂದಿ ಅವುಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಅದರಲ್ಲಿ 48 ಲಕ್ಷ ಮಂದಿ ಪ್ರಯೋಜನ ಪಡೆಯುವವರು ಇತರ ಧರ್ಮದವರಾಗಿದ್ದಾರೆ. ಕ್ರೈಸ್ತರು ದೇಶದ ಅಭಿವೃದ್ಧಿಗೆ ಸ್ವಾತಂತ್ರ್ಯ ಪೂರ್ವದಿಂದಲೇ ತಮ್ಮ ಕೊಡುಗೆಯನ್ನು ನೀಡಿದ್ದಾರೆ’ ಎಂದರು.
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರಯ್ಯ ಅಂಜುಮ್ ಮಾತನಾಡಿ, ರೋಗಿಗಳ ಸೇವೆ ಹಾಗೂ ಶಿಕ್ಷಣವನ್ನು ಎತ್ತಿ ಹಿಡಿದು ಭಾರತ ವಿಶ್ವದಲ್ಲಿ ತಲೆ ಎತ್ತಿ ನಿಲ್ಲಲು ದಾರಿ ತೋರಿದವರು ಕ್ರೈಸ್ತ ಸಮುದಾಯದವರು. ಶಾಂತಿಯನ್ನು ಜಪಿಸಿದ ಕ್ರೈಸ್ತ ಸಮುದಾಯಕ್ಕೆ ಮಾಡಿದ ಹಿಂಸೆ ಖಂಡನೀಯ. ಅಲ್ಪಸಂಖ್ಯಾತರ ವಿರುದ್ದ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಭಾರತದ ಸಂವಿಧಾನದ ಅಡಿಯಲ್ಲೇ ಪ್ರತಿಭಟಿಸಿದ್ದೇವೆ ಎಂದರು.
ಕಥೊಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ರೊನಾಲ್ಡ್ ಆಲ್ಮೇಡಾ ಮಾತನಾಡಿ, ಕ್ರೈಸ್ತ ಸನ್ಯಾಸಿನಿಯರ ಮೇಲೆ ಹಾಕಲಾಗಿರುವ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆದಿಲ್ಲ. ಅಲ್ಲದೆ ಅವರನ್ನು ರೈಲು ನಿಲ್ದಾಣದಲ್ಲಿ ಅಮಾನವೀಯವಾಗಿ ನಡೆಸಿಕೊಂಡ ಸಂಘಟನೆಗಳ ವಿರುದ್ದ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ಸ್ಟೀಫನ್ ಡಿಸೋಜಾ, ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ, ಧಾರ್ಮಿಕ ಗುರುಗಳ ಎಪಿಸ್ಕೋಪಲ್ ವಿಕಾರ್ ಜ್ಯೋ ತಾವ್ರೊ, ಸಹಬಾಳ್ವೆ ಸಂಘಟನೆಯ ಫಣಿರಾಜ್, ಭಾರತೀಯ ಕಥೊಲಿಕ್ ಯುವ ಸಂಚಾಲನ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ನಿತಿನ್ ಬಾರೆಟ್ಟೊ, ಕಥೊಲಿಕ್ ಸಭಾ ಕಾರ್ಯದರ್ಶಿ ಜೋಯೆಲ್, ಬ್ರಹ್ಮಾವರ ಸಿರಿಯನ್ ಒರ್ಥೊಡಕ್ಸ್ ಸಭೆಯ ವಿಕಾರ್ ಜನರಲ್ ಎಂ.ಸಿ. ಮಥಾಯಿ, ಕರ್ನಾಟಕ ಸದರ್ನ್ ಡಯಾಸಿಸ್ ಉಡುಪಿ ವಲಯಾಧ್ಯಕ್ಷ ಕಿಶೋರ್ ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚ್‌ಗಳಿಂದ ಸಂಗ್ರಹಿಸಿದ ಸಹಿಗಳೊಂದಿಗೆ ರಾಷ್ಟ್ರಪತಿ, ಪ್ರಧಾನಿ, ಛತ್ತೀಸಗಡದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಮನವಿಯನ್ನು ನಿಯೋಜಿತ ಅಧ್ಯಕ್ಷ ಲೂಯಿಸ್ ಡಿಸೋಜ ವಾಚಿಸಿದರು, ಸುಗಮ್ಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸಿಲ್ವಿಯಾ ಸುವಾರಿಸ್ ವಂದಿಸಿದರು. ಸಾಮಾಜಿಕ ಕಾರ್ಯಕರ್ತೆ ವೆರೋನಿಕಾ ಕರ್ನೆಲಿಯೊ ನಿರೂಪಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ:
ಕ್ರೈಸ್ತ ಸನ್ಯಾಸಿನಿಯರ ಮೇಲೆ ಹೇರಲಾದ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಬೇಕು. ಬಲಪಂಥೀಯ ಸಂಘಟನೆಗಳಿಂದ ನಡೆದ ದೌರ್ಜನ್ಯದ ಕುರಿತು ಸೂಕ್ತವಾದ ತನಿಖೆ ನಡೆಸಬೇಕು ಮತ್ತು ಘಟನೆಗೆ ಕಾರಣರಾದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು. ಅಲ್ಪಸಂಖ್ಯಾತ ಸಮುದಾಯಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಬೇಕು. ಅಲ್ಪ ಸಂಖ್ಯಾತರ ಮಾನವ ಹಕ್ಕು ಹಾಗೂ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ನಿಲ್ಲಿಸಬೇಕು ಮೊದಲಾದ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಕಾರರು ಆಗ್ರಹಿಸಿದರು.
‘ಮಾನವ ಹಕ್ಕುಗಳಿಗೆ ಧಕ್ಕೆ ಬಂದಾಗ ಹೋರಾಟ ಅನಿವಾರ್ಯ’:
ಎಲ್ಲರೂ ಸಮಾನರು ಎಂಬ ತತ್ವದಂತೆ ಪ್ರತಿಯೊಬ್ಬರಿಗೂ ಅವರವರ ಧರ್ಮವನ್ನು ಅನುಸರಿಸುವ ಹಕ್ಕು ಇದೆ. ಛತ್ತೀಸಗಢದ ಘಟನೆಯಲ್ಲಿ ಕ್ರೈಸ್ತ ಸನ್ಯಾಸಿನಿಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕೆಲಸವಾಗಿದ್ದು ಅದನ್ನು ಪ್ರತಿಯೊಬ್ಬ ಭಾರತೀಯರೂ ಖಂಡಿಸಲೇಬೇಕು. ಸಹೋದರತೆ ಮತ್ತು ಸಹಬಾಳ್ವೆ ಸಂವಿಧಾನದ ಮೂಲ ತತ್ವವಾಗಿದ್ದು ಅದಕ್ಕೆ ಧಕ್ಕೆ ಬಂದಾಗ ದೇಶ ಪ್ರಗತಿ ಕಾಣಲು ಸಾಧ್ಯವಿಲ್ಲ. ಮಾನವ ಹಕ್ಕುಗಳಿಗೆ ಧಕ್ಕೆ ಬಂದಾಗ ಅದರ ವಿರುದ್ದ ಹೋರಾಟ ಮಾಡಲೇಬೇಕಾದ ಅವಶ್ಯಕತೆ ಇದೆ ಎಂದು ಸಾಮಾಜಿಕ ಚಿಂತಕ ಗಣನಾಥ ಎಕ್ಕಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.