ADVERTISEMENT

ಉಡುಪಿ | ಮುಖ್ಯ ನ್ಯಾಯಮೂರ್ತಿಗೆ ಅಪಮಾನ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 6:50 IST
Last Updated 10 ಅಕ್ಟೋಬರ್ 2025, 6:50 IST
ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಅಪಮಾನ ಮಾಡಿರುವುದನ್ನು ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ ನಡೆಯಿತು
ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಅಪಮಾನ ಮಾಡಿರುವುದನ್ನು ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ ನಡೆಯಿತು   

ಉಡುಪಿ: ಅಂಬೇಡ್ಕರ್ ಆಶಯಗಳ ಪ್ರತಿಪಾದಕ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್‌ರನ್ನು ಗಡೀಪಾರು ಮಾಡಬೇಕೆಂದು ದಲಿತ ಚಿಂತಕ ಜಯನ್ ಮಲ್ಪೆ ಆಗ್ರಹಿಸಿದರು.

ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಅಂಬೇಡ್ಕರ್ ಯುವಸೇನೆ ಗುರುವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಭಾರತದ ಆಡಳಿತ ವ್ಯವಸ್ಥೆ ಇರುವುದು ಧಾರ್ಮಿಕ ಗ್ರಂಥಗಳ ಆಧಾರದ ಮೇಲಲ್ಲ. ಸಂವಿಧಾನದ ಮೇಲೆ. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಕೃತ್ಯವು, ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಹೇಳಿದರು.

ADVERTISEMENT

ಚಿಂತಕ ಗಣನಾಥ ಎಕ್ಕಾರು ಮಾತನಾಡಿ, ಈ ಕೃತ್ಯವು ಇಡೀ ಭಾರತವನ್ನೇ ಅವಮಾನಿಸಿದಂತೆ. ನಾವು ಸಂವಿಧಾನದ ಆಶಯವನ್ನು ಉಳಿಸದೇ ಹೋದರೆ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ ಎಂದರು.

ದಲಿತ ಮುಖಂಡ ಶೇಖರ ಹೆಜಮಾಡಿ, ದಸಂಸ ಭೀಮವಾದದ ರಾಜ್ಯ ಸಂಘಟನಾ ಸಂಚಾಲಕ ಶೇಖರ ಹಾವಂಜೆ, ದಲಿತ ಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು, ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿದರು.

ಮಹಾಬಲ ಕುಂದರ್, ಚಾಲ್ಸ್ ಅಂಬ್ಲರ್, ಇದ್ರಿಸ್ ಹೂಡೆ, ಕೃಷ್ಣ ಬಂಗೇರ, ಲಕ್ಷ್ಮಣ ಬೈಂದೂರು, ರಾಮ ಮಯ್ಯಾಡಿ, ಹರೀಶ್ ಸಲ್ಯಾನ್, ಯುವರಾಜ್ ಪುತ್ತೂರು, ವಸಂತ ಪಾದೆಬೆಟ್ಟು, ದಯಾಕರ್ ಮಲ್ಪೆ, ಮಾಧವ ಕರ್ಕೇರ, ಸಾಧು ಚಿಟ್ಪಾಡಿ, ಧನಂಜಯ, ರವಿರಾಜ್ ಲಕ್ಷ್ಮಿನಗರ, ವಿಶ್ವನಾಥ ಹಾಳೇಕಟ್ಟೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.