ADVERTISEMENT

ಮಾರುಕಟ್ಟೆಗೆ ಬರುತ್ತಿದೆ ತೆಂಗಿನ ‘ಕಲ್ಪರಸ’

ತೆಂಗಿನ ಉತ್ಪನ್ನಗಳ ಮೌಲ್ಯವರ್ಧನೆಗೆ ಉಕಾಸ ಸಂಸ್ಥೆಯಿಂದ ವಿಭಿನ್ನ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 12:25 IST
Last Updated 16 ಮಾರ್ಚ್ 2021, 12:25 IST
‘ಕಲ್ಪರಸ’ ಸಂಗ್ರಹಿಸುವ ವಿಧಾನದ ಕುರಿತು ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಪ್ರಾತ್ಯಕ್ಷಿಕೆ ನೀಡಿದರು.
‘ಕಲ್ಪರಸ’ ಸಂಗ್ರಹಿಸುವ ವಿಧಾನದ ಕುರಿತು ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಪ್ರಾತ್ಯಕ್ಷಿಕೆ ನೀಡಿದರು.   

ಉಡುಪಿ: ತೆಂಗು ಬೆಳೆಗಾರರ ಹಿತಕಾಯುವ ಹಾಗೂ ತೆಂಗಿನ ಉತ್ಪನ್ನಗಳ ಮೌಲ್ಯವರ್ಧನೆ ದೃಷ್ಟಿಯಿಂದ ತೆಂಗಿನ ‘ಕಲ್ಪರಸ’ವನ್ನು ಶೀಘ್ರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಉಡುಪಿ ಕಲ್ಪರಸ ಕೊಕೊನಟ್‌ ಹಾಗೂ ಆಲ್‌ಸ್ಪೈಸಸ್‌ ಪ್ರೊಡ್ಯುಸರ್ ಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣ ಉಡುಪ ತಿಳಿಸಿದರು.

ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, 2019ರಲ್ಲಿ ಕಾಸರಗೋಡಿನ ಸಿಪಿಸಿಆರ್‌ಐ ಸಂಸ್ಥೆಯಿಂದ ಕಲ್ಪರಸ ತಂತ್ರಜ್ಞಾನವನ್ನು ಖರೀದಿಸಿದ್ದು, 2020ರ ಮಾರ್ಚ್‌ನಲ್ಲಿ ಕಲ್ಪರಸ ಸಂಗ್ರಹಣೆ ಹಾಗೂ ಸಂಸ್ಕರಣೆಗಾಗಿ ಅಬಕಾರಿ ಉಪ ಆಯುಕ್ತರಿಂದ ಪರವಾನಗಿ ಪಡೆಯಲಾಗಿದೆ. ಕಲ್ಪರಸವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಶೀಘ್ರ ಪರವಾನಗಿ ಸಿಗಲಿದ್ದು, ಕುಂದಾಪುರ ತಾಲ್ಲೂಕಿನ ಜಪ್ತಿಯಲ್ಲಿ ಸಂಸ್ಕರಣಾ ಘಟಕ ಕಾರ್ಯಾರಂಭ ಮಾಡಲಿದ್ದು, ಮಾರಾಟ ಮಳಿಗೆ ತೆರೆಯಲಾಗುವುದು ಎಂದರು.

5,000 ಕುಟುಂಬ ತಲುಪುವ ಗುರಿ

ADVERTISEMENT

ಜಿಲ್ಲೆಯಲ್ಲಿ 1028 ರೈತರು ಸಂಸ್ಥೆಗೆ ಷೇರುದಾರರಾಗಿದ್ದು ಐದು ವರ್ಷಗಳಲ್ಲಿ 5,000 ಕುಟುಂಬ ತಲುಪುವ ಗುರಿ ಇದೆ. ಪ್ರತಿ ಷೇರುದಾರರಿಂದ 8 ತೆಂಗಿನ ಮರಗಳಿಂದ ಮಾತ್ರ ಕಲ್ಪರಸ ಖರೀದಿಸಲು ಸಂಸ್ಥೆ ತೀರ್ಮಾನಿಸಿದ್ದು, ಕಲ್ಪರಸ ತೆಗೆಯಲು ಈಗಾಗಲೇ 14 ತಂತ್ರಜ್ಞರಿಗೆ 45 ದಿನಗಳ ತರಬೇತಿ ನೀಡಲಾಗಿದೆ ಎಂದು ಸತ್ಯನಾರಾಯಣ ಉಡುಪ ತಿಳಿಸಿದರು.

ಲೀಟರ್‌ಗೆ ರೈತರಿಗೆ ಸಿಗುವುದು ಎಷ್ಟು?

ಒಂದು ತೆಂಗಿನ ಮರದಿಂದ ಪ್ರತಿದಿನ 2 ಲೀಟರ್‌ನಷ್ಟು ಕಲ್ಪರಸ ಸಿಗಲಿದೆ. ವರ್ಷಕ್ಕೆ ಒಂದು ಮರದಿಂದ ಕನಿಷ್ಠ 600 ಲೀಟರ್‌ನಂತೆ 8 ಮರಗಳಿಂದ 5,000 ಲೀಟರ್‌ನಷ್ಟು ಉತ್ಪಾದಿಸಬಹುದು. ಲೀಟರ್‌ಗೆ ರೈತರಿಗೆ ₹ 20 ದರದಂತೆ ವರ್ಷಕ್ಕೆ 1 ಲಕ್ಷದಷ್ಟು ಆದಾಯಗಳಿಸಬಹುದು. ಸ್ವತಃ ರೈತರೇ ಕಲ್ಪರಸ ಇಳಿಸಿದರೆ ವರ್ಷಕ್ಕೆ ₹ 2.5 ಲಕ್ಷ ಸಂಪಾದಿಸಬಹುದು.

ಗ್ರೀನ್‌ಕಾಲರ್ ಉದ್ಯೋಗ

ವೈಟ್‌ಕಾಲರ್ ಉದ್ಯೋಗದಂತೆ ಕಲ್ಪರಸ ತೆಗೆಯುವ ತಂತ್ರಜ್ಞರು ಗ್ರೀನ್‌ಕಾಲರ್ ಉದ್ಯೋಗ ಮಾಡಲಿದ್ದಾರೆ. ಪಿಎಫ್‌, ಇಎಸ್‌ಐ ಸೌಲಭ್ಯದ ಜತೆಗೆ ಪ್ರತಿ ಉದ್ಯೋಗಿ ತಿಂಗಳಿಗೆ ₹ 30,000ದವರೆಗೂ ದುಡಿಯಬಹುದು.ಟ್ಯಾಪಿಂಗ್ ತಂತ್ರಜ್ಞರಿಗೆ ಪ್ರತಿ ಮರಕ್ಕೆ ₹ 25 ನೀಡಲಾಗುವುದು.

ಕಲ್ಪರಸ ಸಂಗ್ರಹ ಹೇಗೆ

ತೆಂಗಿನ ಮರದ ಹೊಂಬಾಳೆಯ ತುದಿ ಕತ್ತರಿಸಿ ಐಸ್‌ಕ್ಯೂಬ್‌ ಇರುವ ಇನ್‌ಸುಲೇಟೆಡ್‌ ಕ್ಯಾನ್‌ ಕಟ್ಟಲಾಗುತ್ತದೆ. ಅಲ್ಲಿ ಸಂಗ್ರಹವಾಗುವ ರಸವನ್ನು ಪ್ರತಿದಿನ 2 ರಿಂದ 3 ಬಾರಿ ತೆಗೆಯಲಾಗುವುದು. ಪ್ರತಿ ಗ್ರಾಮಗಳಲ್ಲಿ ಕನಿಷ್ಠ 20 ರಿಂದ 30 ರೈತರನ್ನು ಹೊಂದಿರುವ ಸೊಸೈಟಿ ರಚಿಸಿ ಅಲ್ಲಿ ಶೀಥಲೀಕರಣ ಘಟಕದ ವ್ಯವಸ್ಥೆ ಮಾಡಿ, ಕಲ್ಪರಸ ಸಂಗ್ರಹಿಸಲಾಗುತ್ತದೆ. ಅಲ್ಲಿಂದ ಕೋಲ್ಡ್‌ ಸ್ಟೋರೇಜ್‌ ಬಾಕ್ಸ್‌ಗಳಲ್ಲಿ ಕಲ್ಪರಸವನ್ನಿಟ್ಟು ಮಾರಾಟ ಮಾಡಲಾಗುವುದು.

ದರ ಎಷ್ಟು?

ಮಾರುಕಟ್ಟೆಯಲ್ಲಿ 200 ಎಂಎಲ್‌ಗೆ ₹ 30ರಂತೆ ಮಾರಾಟ ಮಾಡುವ ಉದ್ದೇಶವಿದೆ. ಲೀಟರ್‌ಗೆ ₹ 150 ದರವಿದೆ. ಮುಂದೆ ಕಲ್ಪರಸದಿಂದ ಬೆಲ್ಲ, ಸಕ್ಕರೆ, ಜೇನುತುಪ್ಪ, ವಿನೆಗರ್, ಚಾಕೊಲೆಟ್‌, ಐಸ್‌ಕ್ರೀಮ್ ತಯಾರಿಸುವ ಉದ್ದೇಶವಿದೆ ಎಂದು ಸತ್ಯನಾರಾಯಣ ಉಡುಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನವೀನ್‌ಚಂದ್ರ, ಬಿ.ವಿ.ಪೂಜಾರಿ, ಶ್ರೀನಿವಾಸ್ ಭಟ್‌, ಅನಂತ ಪದ್ಮನಾಭ, ಫಣಿದರ ಉಡುಪ, ಸೀತಾರಾಮ ಗಾಣಿಗ, ಅನಂತ್ ಭಟ್‌, ಉಮಾನಾಥ್ ರಾನಡೆ, ಸುಂದರ ಶೆಟ್ಟಿ, ವಾಸುದೇವ ಶಾನುಭಾಗ್, ರಾಜೀವ್ ಶೆಟ್ಟಿ, ಆಸ್ತಿಕ ಶಾಸ್ತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.