ADVERTISEMENT

ಜನನ, ಮರಣ ಕಡ್ಡಾಯ ನೋಂದಾಯಿಸಿ: ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ

​ಪ್ರಜಾವಾಣಿ ವಾರ್ತೆ
Published 22 ಮೇ 2025, 13:26 IST
Last Updated 22 ಮೇ 2025, 13:26 IST
ಜಿಲ್ಲಾ ಮಟ್ಟದ ಜನನ-ಮರಣ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆ ಗುರುವಾರ ಜರುಗಿತು
ಜಿಲ್ಲಾ ಮಟ್ಟದ ಜನನ-ಮರಣ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆ ಗುರುವಾರ ಜರುಗಿತು   

ಉಡುಪಿ: ಜನನ, ಮರಣಗಳನ್ನು 21 ದಿನಗಳ ಒಳಗಾಗಿ ಕಡ್ಡಾಯವಾಗಿ ಸೂಕ್ತ ಪ್ರಾಧಿಕಾರದ ಮುಂದೆ ಪ್ರತಿಯೊಬ್ಬರೂ ನೋಂದಾಯಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಹೇಳಿದರು.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಜನನ-ಮರಣ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ 313 ಹಾಗೂ ನಗರ ಪ್ರದೇಶದಲ್ಲಿ 13 ಸೇರಿದಂತೆ ಒಟ್ಟು 326 ನೋಂದಣಿ ಘಟಕಗಳು ಇವೆ ಎಂದೂ ವಿವರಿಸಿದರು.

ನೋಂದಣಿಗೆ 21 ರಿಂದ 30 ದಿನಗಳ ವರೆಗೆ ₹ 20, 30 ದಿನಗಳ ನಂತರ ಒಂದು ವರ್ಷದ ವರೆಗೆ ₹50 ಶುಲ್ಕ ಪಾವತಿಸಬೇಕು. 1 ವರ್ಷದ ನಂತರ ನ್ಯಾಯಾಲಯದ ಆದೇಶದೊಂದಿಗೆ ₹10 ಶುಲ್ಕ ಪಾವತಿಸಿ, ನೋಂದಾಯಿಸಬಹುದಾಗಿದೆ ಎಂದರು.

ವಿದೇಶದಲ್ಲಿ ಜನಿಸಿದ ಶಿಶುಗಳ ಜನನವನ್ನು ವಿದೇಶದಲ್ಲಿ ನೋಂದಾವಣೆ ಮಾಡಬಹುದು. ಆದರೆ ಶಿಶುವಿನ ಪೋಷಕರು ಭಾರತೀಯ ಪೌರರಾಗಿ ನಮ್ಮ ದೇಶದಲ್ಲಿ ನೆಲೆಸುವ ಉದ್ದೇಶ ಹೊಂದಿದ್ದಲ್ಲಿ ದೇಶಕ್ಕೆ ಹಿಂದಿರುಗಿದ 60 ದಿನಗಳ ಒಳಗಾಗಿ ನೋಂದಣಿ ಮಾಡಿಸಬಹುದಾಗಿದೆ ಎಂದರು.

ಕಳೆದ ಸಾಲಿನಲ್ಲಿ ಗ್ರಾಮಾಂತರ ಪ್ರದೇಶದಲ್ಲಿ 1,185, ನಗರ ವ್ಯಾಪ್ತಿಯಲ್ಲಿ 9,976  ಸೇರಿ ಒಟ್ಟು 11,161 ಜನನ ನೋಂದಣಿಯಾದರೆ, ಗ್ರಾಮೀಣ ಪ್ರದೇಶದಲ್ಲಿ 7,269, ನಗರ ಪ್ರದೇಶದಲ್ಲಿ 5,000 ಸೇರಿ ಒಟ್ಟು 12,269 ಮರಣ ನೋಂದಣಿಯಾಗಿದೆ. ಜಿಲ್ಲೆಯಲ್ಲಿ ಹೆಣ್ಣು ಮತ್ತು ಗಂಡಿನ ಅನುಪಾತವು 976 ರಷ್ಟಿದೆ ಎಂದರು.

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಂ.ವಿ. ದೊಡಮನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ಉಪಸ್ಥಿತರಿದ್ದರು.

ಯಾವುದೇ ಮಗುವಿನ ಜನನವನ್ನು ಹೆಸರಿಲ್ಲದೇ ನೋಂದಣಿ ಮಾಡಲು ಅವಕಾಶವಿದ್ದು ಆ ದಿನದಿಂದ 12 ತಿಂಗಳ ಒಳಗಾಗಿ ಮಗುವಿನ ಹೆಸರನ್ನು ಯಾವುದೇ ಶುಲ್ಕವಿಲ್ಲದೇ ರಿಜಿಸ್ಟರ್‌ನಲ್ಲಿ ಸೇರ್ಪಡೆ ಮಾಡಬಹುದಾಗಿದೆ
ಕೆ. ವಿದ್ಯಾಕುಮಾರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.