ADVERTISEMENT

ಕರಾವಳಿ ನೆಲದಲ್ಲಿ ‘ಮಾಸ್ಟರ್‌’ ನೆನಪು

ಹಿರಣ್ಣಯ್ಯ ನಾಟಕ ನೋಡಲು ಕಿಕ್ಕಿರಿದು ಸೇರುತ್ತಿದ್ದರು: ನೆನಪುಗಳ ಬಿಚ್ಚಿಟ್ಟ ರಂಗಾಸಕ್ತರು

ಬಾಲಚಂದ್ರ ಎಚ್.
Published 2 ಮೇ 2019, 15:36 IST
Last Updated 2 ಮೇ 2019, 15:36 IST
ಮಾಸ್ಟರ್ ಹಿರಣ್ಣಯ್ಯ (ಸಂಗ್ರಹ ಚಿತ್ರ)ಪ್ರಜಾವಾಣಿ ಚಿತ್ರ
ಮಾಸ್ಟರ್ ಹಿರಣ್ಣಯ್ಯ (ಸಂಗ್ರಹ ಚಿತ್ರ)ಪ್ರಜಾವಾಣಿ ಚಿತ್ರ   

ಉಡುಪಿ: ಕರಾವಳಿಯ ರಂಗಭೂಮಿಗೆ ಶಕ್ತಿ ತುಂಬಿದ ಹೆಗ್ಗಳಿಕೆ ಖ್ಯಾತ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರಿಗೆ ಸಲ್ಲುತ್ತದೆ. ಉಡುಪಿಯ ರಂಗಭೂಮಿ ಜತೆಗಿನ ಅವರ ಒಡನಾಟಕ್ಕೆ ದಶಕಗಳ ನಂಟಿದೆ. ಸಾಮಾಜಿಕ ಕಳಕಳಿಯ ‘ಮಾಸ್ಟರ್‌’ ನಾಟಕಗಳು ಇಂದಿಗೂ ಜನರ ಮನಸ್ಸಿನಲ್ಲಿ ಹಸಿರಾಗಿವೆ ಎನ್ನುತ್ತಾರೆ ರಂಗಾಸಕ್ತರು.

ಯಕ್ಷಗಾನ, ಭೂತ ಕೋಲ, ನಾಗಾರಾಧನೆ ಹೀಗೆ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಉಡುಪಿಯಲ್ಲಿ ನಾಟಕಗಳ ಗೀಳು ಹೆಚ್ಚಿಸಿದವರು ಮಾಸ್ಟರ್ ಹಿರಣ್ಣಯ್ಯ. ದಶಕಗಳ ಹಿಂದೆ ಅವರ ಹಲವು ನಾಟಕಗಳು ಇಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ರಾಜಕೀಯ ವ್ಯವಸ್ಥೆಯೊಳಗಿನ ಹುಳುಕುಗಳನ್ನು ಎತ್ತಿ ತೋರಿಸುವ ಸಾಮಾಜಿಕ ನಾಟಕಗಳು ಇಲ್ಲಿನ ರಂಗಪ್ರೇಮಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದವರು ಎನ್ನುತ್ತಾರೆ ರಂಗಭೂಮಿ ಉಡುಪಿ ಸಂಸ್ಥೆಯ ಕಾರ್ಯದರ್ಶಿ ರವಿರಾಜ್‌.

ಹಿಂದೆ ಮಾಸ್ಟರ್ ಹಿರಣ್ಣಯ್ಯ ಅವರ ರಂಗ ತಂಡ ಉಡುಪಿಯ ಹೃದಯ ಭಾಗದಲ್ಲಿದ್ದ ಕಾನೂನು ಕಾಲೇಜಿನ ಹೊರಾಂಗಣ ವೇದಿಕೆಯಲ್ಲಿ ‘ಲಂಚಾವತಾರ’ ನಾಟಕ ಪ್ರದರ್ಶಿಸಿತ್ತು. ನಾಟಕ ನೋಡಲು ಜನ ಕಿಕ್ಕಿರಿದು ತುಂಬಿದ್ದರು. ಕುರ್ಚಿಗಳು ಸಿಗದೆ ಸಭಾಂಗಣದ ಹೊರಗೆ ನಿಂತು ನಾಟಕ ವೀಕ್ಷಿಸಿದರು ಎಂದು ಜನಪ್ರಿಯತೆಯನ್ನು ವಿವರಿಸಿದರು ರವಿರಾಜ್‌.

ADVERTISEMENT

ರಾಜಕೀಯವನ್ನು ವಿಡಂಬನಾತ್ಮಕವಾಗಿ ಟೀಕಿಸುವ ಶೈಲಿ, ಅನಿಸಿದ್ದನ್ನು ನೇರವಾಗಿ ಹೇಳುವ ಛಾತಿ, ಒರಟಾಗಿದ್ದರೂ ಮನಸ್ಸಿಗೆ ನಾಟುವಂತಹ ಸಂಭಾಷಣೆ ಎಲ್ಲರನ್ನು ಸೆಳೆಯುವಲ್ಲಿ ಸಫಲವಾಗಿತ್ತು. ನಾಟಕಗಳಿಂದ ವಿಮುಖರಾಗಿದ್ದವರನ್ನು ಮತ್ತೆ ರಂಗಭೂಮಿಯತ್ತ ಕರೆತರುವಂತಹ ಶಕ್ತಿ ಹಿರಣ್ಣಯ್ಯ ನಾಟಕಗಳಿಗಿತ್ತು. ಜತೆಗೆ, ಜಿಲ್ಲೆಯ ರಂಗಭೂಮಿಗೆ ಆರ್ಥಿಕವಾಗಿ ಶಕ್ತಿ ತುಂಬುವಲ್ಲೂ ಅವರ ಕೊಡುಗೆ ದೊಡ್ಡದು ಎಂದು ಸ್ಮರಿಸಿದರು.

ಕರಾವಳಿಯಲ್ಲಿ ಪೌರಾಣಿಕ ನಾಟಕಗಳು ಹೆಚ್ಚು ಪ್ರಚಲಿತದಲ್ಲಿದ್ದ ಕಾಲಘಟ್ಟದಲ್ಲಿ, ಸಾಮಾಜಿಕ ನಾಟಕಗಳ ಪ್ರಯೋಗದ ಮೂಲಕ ಹಿರಣ್ಣಯ್ಯ ಯಶಸ್ವಿಯಾದರು. ಇಲ್ಲಿನ ಜನರು ಎಲ್ಲವನ್ನೂ ಸ್ವೀಕರಿಸುವುದಿಲ್ಲ. ಆದರೆ, ಮಾಸ್ಟರ್ ನಾಟಕಗಳನ್ನು ಮಾತ್ರ ಮನಸಾರೆ ಮೆಚ್ಚಿಕೊಂಡರು ಎಂದರು.‌

2001ರಲ್ಲಿ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಹಿರಣ್ಣಯ್ಯ ಜತೆಗೆ ರಂಗ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅವರ ಮಾತಿನ ಶೈಲಿ, ಮಗುವಿನಂತಹ ವ್ಯಕ್ತಿತ್ವ, ಮಾತಿನ ಮೂಲಕ ವ್ಯವಸ್ಥೆ ವಿರುದ್ಧ ಬೀಸುತ್ತಿದ್ದ ಚಾಟಿ ಏಟು ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು. ಅಂದು ಜೀವನದಲ್ಲಿ ಎದುರಿಸಿದ್ದ ಸವಾಲುಗಳು, ಬೆದರಿಕೆ ಹೀಗೆ ಕಹಿ ಘಟನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರು ಎಂದು ಹಳೆಯ ನೆನಪುಗಳನ್ನು ಮೆಲಕು ಹಾಕಿದರು ರವಿರಾಜ್‌.

ಹಿರಿಯರಾದ ಆನಂದ ಗಾಣಿಗ, ಡಾ.ಎಚ್‌.ಶಾಂತಾರಾಮ್ ಅವರಂತಹ ಕಲಾಪೋಷಕರ ಜತೆಗೆ ಉತ್ತಮ ಒಡನಾಟ ಹೊಂದಿದ್ದ ಮಾಸ್ಟರ್ ಹಿರಣ್ಣಯ್ಯ ಅವರ ನಿಧನ ರಂಗಭೂಮಿಗೆ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.