ಉಡುಪಿ: ಕೋವಿಡ್ ಸೋಂಕಿತರಿಗೆ ವೈದ್ಯಕೀಯ ನೆರವು ನೀಡಲು ಜಿಲ್ಲಾ ಯುವ ಕಾಂಗ್ರೆಸ್‌ನಿಂದ ಆಂಬುಲೆನ್ಸ್ ಸೇವೆ ಹಾಗೂ ವೈದ್ಯಕೀಯ ತುರ್ತು ಸೇವಾ ವಾಹನಗಳಿಗೆ ಶುಕ್ರವಾರ ಚಾಲನೆ ನೀಡಲಾಯಿತು.
ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಆಂಬುಲೆನ್ಸ್ ಹಾಗೂ 8 ವೈದ್ಯಕೀಯ ತುರ್ತು ವಾಹನಗಳಿಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಜಿಲ್ಲಾ ಕಾಂಗ್ರೆಸ್ ಕೈಜೋಡಿಸಿದೆ. ಕರ್ಫ್ಯೂ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಜಿಲ್ಲಾ ಕಾಂಗ್ರೆಸ್‌ನಿಂದ ಕ್ಷೇತ್ರವಾರು ಸಹಾಯವಾಣಿ ಮತ್ತು ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ಭಾಗದಲ್ಲಿ ನಾಲ್ವರು ಸಕ್ರಿಯ ಕಾರ್ಯಕರ್ತರು ಸ್ವಯಂ ಸೇವಕರಾಗಿದ್ದಾರೆ. ಹೋಂ ಐಸೋಲೇಷನ್‌ನಲ್ಲಿ ಇರುವವರಿಗೆ ಮನೆಗೆ ಔಷಧಿ ತಲುಪಿಸಲಾಗುತ್ತದೆ. ಆಸ್ಪತ್ರೆಗೆ ತೆರಳುವವರಿಗೆ ಉಚಿತ ಆಂಬುಲೆನ್ಸ್ ಸೇವೆ ಒದಗಿಸಲಾಗುತ್ತದೆ. ಕೋವಿಡ್ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಕಾಂಗ್ರೆಸ್ ಪಕ್ಷವೂ ಕೈಜೋಡಿಸಿದೆ. ಆಂಬ್ಯುಲೆನ್ಸ್ ಸೇವೆ, ಸಂತ್ರಸ್ತರಿಗೆ ಊಟ, ಔಷಧೋಪಚಾರ ನೀಡುವುದರೊಂದಿಗೆ ಜನರ ಸೇವೆಯಲ್ಲಿ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ ಎಂದರು.
ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್ ಕೋಟ್ಯಾನ್ ಮಾಹಿತಿ ನೀಡಿ, ಜಿಲ್ಲೆಯ ಯಾವುದೇ ಆರೋಗ್ಯ ಕೇಂದ್ರಗಗಳಿಗೆ ತುರ್ತಾಗಿ ಕೋವಿಡ್ ಸೋಂಕಿತರನ್ನು ಕರೆದೊಯ್ಯಲು, ತುರ್ತು ಚಿಕಿತ್ಸೆ ಕೊಡಿಸಲು ಹಾಗೂ ಸಿಟಿ ಸ್ಕ್ಯಾನಿಂಗ್‌ಗಾಗಿ ದೂರದ ಆಸ್ಪತ್ರೆಗಳಿಗೆ ಹೋಗಬೇಕಾದವರು ವಾಹನಗಳ ಸೇವೆ ಬಳಸಿಕೊಳ್ಳಬಹುದು. ಕೋವಿಡ್‌ನಿಂದ ಮೃತರಾದವರ ಶವ ಸಾಗಣೆಗೂ ವಾಹನಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.