ADVERTISEMENT

ಗೋಡ್ಸೆವಾದಿಗಳ ಕೈಲಿ ದೇಶ ನಲುಗುತ್ತಿದೆ; ಚಿಂತಕ ಹರ್ಷಕುಮಾರ್ ಕುಗ್ವೆ ವಾಗ್ದಾಳಿ

ಕಾಂಗ್ರೆಸ್‌ ಪಾದಯಾತ್ರೆಯಲ್ಲಿ ಚಿಂತಕ ಹರ್ಷಕುಮಾರ್ ಕುಗ್ವೆ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 13:02 IST
Last Updated 14 ಆಗಸ್ಟ್ 2021, 13:02 IST
ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಕಾಂಗ್ರೆಸ್‌ ನೇತೃತ್ವದಲ್ಲಿ ಶನಿವಾರ ಕಾಂಗ್ರೆಸ್ ಭವನದಿಂದ ಕ್ಲಾಕ್‌ಟವರ್‌ನ ಗಾಂಧಿಪ್ರತಿಮೆಯ ಬಳಿಗೆ ಪಾದಯಾತ್ರೆ ನಡೆಸಲಾಯಿತು.
ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಕಾಂಗ್ರೆಸ್‌ ನೇತೃತ್ವದಲ್ಲಿ ಶನಿವಾರ ಕಾಂಗ್ರೆಸ್ ಭವನದಿಂದ ಕ್ಲಾಕ್‌ಟವರ್‌ನ ಗಾಂಧಿಪ್ರತಿಮೆಯ ಬಳಿಗೆ ಪಾದಯಾತ್ರೆ ನಡೆಸಲಾಯಿತು.   

ಉಡುಪಿ: ಸಮಾತತೆ, ಭ್ರಾತೃತ್ವ, ಜಾತ್ಯತೀತತೆ, ಸಮಾಜವಾದದ ತಳಹದಿಯ ಮೇಲೆ ರೂಪುಗೊಂಡ ಭಾರತ ಗೋಡ್ಸೆವಾದಿಗಳ ಕೈಗೆ ಸಿಕ್ಕು ನಲುಗುತ್ತಿದೆ ಎಂದು ಚಿಂತಕ ಹರ್ಷಕುಮಾರ್ ಕುಗ್ವೆ ಅಸಮಾಧಾನ ವ್ಯಕ್ತಪಡಿಸಿದರು.

ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಕಾಂಗ್ರೆಸ್‌ ನೇತೃತ್ವದಲ್ಲಿ ಶನಿವಾರ ಕಾಂಗ್ರೆಸ್ ಭವನದಿಂದ ಕ್ಲಾಕ್‌ಟವರ್‌ನ ಗಾಂಧಿಪ್ರತಿಮೆಯ ಬಳಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಮಾತನಾಡಿದರು.

ಮಹಾತ್ಮಾ ಗಾಂಧೀಜಿ ತತ್ವ ಸಿದ್ಧಾಂತಗಳು ಮರೆಯಾಗಿವೆ. ಸುಳ್ಳು, ಅಪಪ್ರಚಾರ ಮುನ್ನಲೆಗೆ ಬಂದಿದೆ. ಸತ್ಯದ ಪರ ನಿಂತವರಿಗೆ, ಹೋರಾಟಗಾರರಿಗೆ, ಬುದ್ದಿಜೀವಿಗಳಿಗೆ ದೇಶದ್ರೋಹಿಗಳ ಪಟ್ಟ ಕಟ್ಟಲಾಗುತ್ತಿದೆ. ಗಾಂಧಿಯನ್ನು ಕೊಂದ ಗೋಡ್ಸೆ ಪ್ರತಿಪಾದಕರು ದೇಶಕ್ಕೆ ಕಂಟಕರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಸರ್ಕಾರಗಳು ಸರ್ವಾಧಿಕಾರಿ ಧೋರಣೆಗಳನ್ನು ಅನುಸರಿಸುತ್ತಿದ್ದು ಗುಲಾಮಗಿರಿಯನ್ನು ಬೋಧಿಸುತ್ತಿದೆ. ಪೆಟ್ರೋಲ್ ಬೆಲೆ ಗಗನಕ್ಕೇರಿ ಜನರು ಸಂಕಷ್ಟಕ್ಕೆ ಸಿಲುಕಿದರೂ ಒಂದು ವರ್ಗ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಗುಲಾಮಗಿರಿ ಪ್ರದರ್ಶಿಸುತ್ತಿದೆ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಧರ್ಮ, ಜಾತಿ, ವರ್ಗಗಳ ಬೇಧ ಇರಲಿಲ್ಲ. ಸ್ವಾತಂತ್ರ್ಯಕ್ಕಾಗಿ ಸಾವಿರಾರು ಹಿಂದೂಗಳು, ಮುಸಲ್ಮಾನರು ಪ್ರಾಣ ತೆತ್ತಿದ್ದಾರೆ. ಹೋರಾಟಗಾರರ ಮನಸ್ಸಿನಲ್ಲಿ ಭಾರತೀಯರು ಎಂಬ ಭಾವನೆ ಇತ್ತೇ ಹೊರತು, ಕೋಮುವಾದ ಇರಲಿಲ್ಲ. ಪ್ರಸ್ತುತ ಧರ್ಮ, ಜಾತಿಗಳ ಹೆಸರಿನಲ್ಲಿ ಸಮಾಜವನ್ನು ಇಬ್ಭಾಗ ಮಾಡಲಾಗುತ್ತಿದೆ ಎಂದರು.

ಸಿಎಎ, ಎನ್‌ಆರ್‌ಸಿ, ರೈತ ವಿರೋಧಿ ಕರಾಳ ಕಾಯ್ದೆಗಳ ಜಾರಿ ಮಾಡಲಾಗುತ್ತಿದೆ. ಅಂಬಾನಿ, ಅದಾನಿಗಳ ಪರವಾದ ಆರ್ಥಿಕ ನೀತಿಗಳನ್ನು ರೂಪಿಸುತ್ತಿದೆ. ಬಡವರು ಹಾಗೂ ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮತ್ತೆ ಸ್ವಾತಂತ್ರ್ಯ ಹೋರಾಟದಂತಹ ಪ್ರತಿಭಟನೆಗಳು ಅವಶ್ಯ ಎಂದು ಹರ್ಷಕುಮಾರ್ ಕುಗ್ವೆ ಅಭಿಪ್ರಾಯಪಟ್ಟರು.

ಈ ಸಂದರ್ಭ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮುಖಂಡರಾದ ಗೋಪಾಲ್ ಪೂಜಾರಿ, ಪ್ರಖ್ಯಾತ್ ಶೆಟ್ಟಿ, ಅಮೃತ್ ಶೆಣೈ, ಭಾಸ್ಕರ್ ರಾವ್ ಕಿದಿಯೂರು, ದೀಪಕ್ ಕೋಟ್ಯಾನ್‌ ಇದ್ದರು.

‘ಸತ್ಯದ ಪರವಾಗಿ ನಿಲ್ಲೋಣ’

1920ರಲ್ಲಿ ಮಹಾತ್ಮಾ ಗಾಂಧೀಜಿ ಕಿಲಾಫತ್ ಚಳವಳಿಯ ಭಾಗವಾಗಿ ಉಡುಪಿಗೆ ಬಂದಿದ್ದರು. ಇಡೀ ದೇಶವನ್ನು ಒಗ್ಗೂಡಿಸುವುದು ಗಾಂಧೀಜಿ ಭೇಟಿಯ ಉದ್ದೇಶವಾಗಿತ್ತು. 1934ರಲ್ಲಿ 2ನೇ ಬಾರಿ ಉಡುಪಿಗೆ ಬಂದು ಅಜ್ಜರಕಾಡು ಉದ್ಯಾನದಲ್ಲಿ ಸಾರ್ವಜನಿಕ ಭಾಷಣ ಮಾಡಿದರು. ‘ಬಂದಿದ್ದು ಬರಲಿ ಸತ್ಯ ಒಂದಿರಲಿ’ ಎಂದು ಜನತೆಗೆ ಕರೆನೀಡಿದ್ದರು. ಗಾಂಧೀಜಿಯ ಕರೆಯಂತೆ ನಾವೆಲ್ಲ ಸತ್ಯದ ಪರವಾಗಿ ನಿಲ್ಲಬೇಕಾಗಿದೆ. ಸುಳ್ಳಿನ ಸರ್ಕಾರಗಳಿಗೆ ಪಾಠ ಕಲಿಸಬೇಕಿದೆ ಎಂದು ಹರ್ಷಕುಮಾರ್ ಕುಗ್ವೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.